ಸೂಲಿಬೆಲೆಯಿಂದ #GramSvarga ಚಾಲೆಂಜ್- ನಾವು ರೆಡಿ ಅಂದ್ರು ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ

– ರಾಜ್ಯದ 28 ಸಂಸದರಿಗೆ ಸೂಲಿಬೆಲೆ ಚಾಲೆಂಜ್
– ಕೆಲಸ ಮಾಡಿಲ್ಲ ಎಂದು ದೂರಬೇಡಿ
– ಮೊದಲ ದಿನದಿಂದಲೇ ಸಂಸದರು ಕೆಲಸ ಮಾಡುವಂತೆ ಅನಿವಾರ್ಯತೆಯನ್ನು ಸೃಷ್ಟಿಸಿ

ಬೆಂಗಳೂರು: ಟೀಂ ಮೋದಿ ಸಂಸ್ಥಾಪಕ ಅಧ್ಯಕ್ಷ, ಯುವ ಬ್ರಿಗೇಡ್ ರೂವಾರಿ ಚಕ್ರವರ್ತಿ ಸೂಲಿಬೆಲೆ ಅವರು ರಾಜ್ಯದ 28 ಎಂಪಿಗಳಿಗೆ `ಗ್ರಾಮ ಸ್ವರ್ಗ’ ಅಭಿಯಾನದ ಸವಾಲು ಹಾಕಿದ್ದು, ಈ ಸವಾಲನ್ನು ಕರ್ನಾಟಕದ ಇಬ್ಬರೂ ಸಂಸದರು ಸ್ವೀಕರಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಅವರು ಕರ್ನಾಟಕದ ಹೊಸ ಎಂಪಿಗಳಿಗೆ ‘ಗ್ರಾಮ ಸ್ವರ್ಗ’ ಚಾಲೆಂಜ್ ಹಾಕಿದ್ದರು. ಒಂದೊಂದು ಗ್ರಾಮವನ್ನು ದತ್ತು ತೆಗೆದುಕೊಂಡು ಅಲ್ಲಿ ವಾಸ್ತವ್ಯ ಹೂಡಿ, ಪರಿಸ್ಥಿತಿ ಅವಲೋಕಿಸಿ, ಅಭಿವೃದ್ಧಿ ಪಡಿಸುವ ಚಾಲೆಂಜ್ ಇದಾಗಿದೆ. ಸಿಎಂ ಗ್ರಾಮ ವಾಸ್ತವ್ಯದಂತೆ ಇದು ಕೂಡ ವಿನೂತನ ಮಾದರಿಯ ಯೋಜನೆ. ಸಾಮಾಜಿಕ ಜಾಲತಾಣದಲ್ಲಿ `ಗ್ರಾಮ ಸ್ವರ್ಗ’ ಅಭಿಯಾನದ ಓಪನ್ ಚಾಲೆಂಜ್ ಹಾಕಲಾಗಿತ್ತು. ಈ ಚಾಲೆಂಜ್ ಅನ್ನು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ಬೆಂಗಳೂರು ದಕ್ಷಿಣದಿಂದ ಮೊದಲ ಬಾರಿಗೆ ಆಯ್ಕೆಯಾದ ಸಂಸದ ತೇಜಸ್ವಿ ಸೂರ್ಯ ಸ್ವೀಕರಿಸಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ “ಗ್ರಾಮ ಸ್ವರ್ಗ” ಅಭಿಯಾನದ ಚಾಲೆಂಜ್ ಕುರಿತು ಒಂದು ಪೋಸ್ಟ್ ಹಾಕಿದ್ದರು. ಈ ವಿನೂತನ ಚಾಲೆಂಜ್ ಪೋಸ್ಟ್ ಗೆ ಮೊದಲು ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿ, ನಾನು ಈ ಚಾಲೆಂಜ್ ಸ್ವೀಕರಿಸುತ್ತೇನೆ ಎಂದಿದ್ದರು. ಬಳಿಕ ತೇಜಸ್ವಿ ಸೂರ್ಯ ಅವರು ಕೂಡ ಈ ಚಾಲೆಂಜ್ ನನಗೆ ಓಕೆ ಎಂದು ಪ್ರತಿಕ್ರಿಯೆ ನೀಡಿದ್ದರು.

ಸೂಲಿಬೆಲೆ ಟ್ವೀಟ್‍ನಲ್ಲಿ ಏನಿದೆ?
ಈ ಯೋಜನೆಯ ಹೆಸರು ಗ್ರಾಮ ಸ್ವರ್ಗ ಅಭಿಯಾನ. ನಾನು ಇಂದು ಕರ್ನಾಟಕದ ಎಲ್ಲಾ 28 ಎಂಪಿಗಳು ಒಂದು ಚಾಲೆಂಜ್ ಹಾಕುತ್ತಿದ್ದೇನೆ. ನಿಮ್ಮ ಕ್ಷೇತ್ರದಲ್ಲಿ ಬರುವ ಯಾವುದಾದರೂ ಒಂದು ಹಳ್ಳಿಯನ್ನು ಆಯ್ದುಕೊಂದು ಅದನ್ನು ಸ್ವರ್ಗದ ಹಾಗೆ ಮಾಡಲಿ ನಿರ್ಧಾರ ಮಾಡಿ. ನೋಡೋಣ ಎಷ್ಟು ಮಂದಿ ಈ ಚಾಲೆಂಜ್ ಸ್ವೀಕರಿಸುತ್ತಾರೆ ಎಂದು ಬರೆದು ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಅನಂತ್‍ಕುಮರ್ ಹೆಗಡೆ ಹಾಗೂ ಭಗವಂತ್ ಖೂಬ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.

ಪ್ರತಾಪ್ ಸಿಂಹ ಹೇಳಿದ್ದೇನು?
ಚಕ್ರವರ್ತಿ ಸೂಲಿಬೆಲೆ ಅವರ ಟ್ವೀಟ್‍ಗೆ ಮೊದಲು ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ನಾನು ಈ ಚಾಲೆಂಜ್ ಅನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ. ಆದರೆ ನೀವು ನನಗೆ ರೋಡ್ ಮ್ಯಾಪ್‍ಗಳು ನೀಡಬೇಕು. ಜೊತೆಗೆ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ನನಗೆ ಸಹಾಯ ಮಾಡಬೇಕು ಎಂದು ಕೇಳಿಕೊಂಡಿದ್ದರು. ಈ ಮನವಿಗೆ ಚಕ್ರವರ್ತಿ ಸೂಲಿಬೆಲೆ ಅವರು ಪ್ರತಿಕ್ರಿಯಿಸಿ, ಖಂಡಿತವಾಗಿಯೂ ಸಹಕರಿಸುತ್ತೇವೆ. ಉತ್ತಮ ಭವಿಷ್ಯಕ್ಕಾಗಿ ಕೈಜೋಡಿಸೋಣ. ನೀವೇ ಈ ಚಾಲೆಂಜ್ ಸ್ವೀಕರಿಸಿದ ಮೊದಲ ಸಂಸದರಾಗಿದ್ದೀರಿ. ಆದಷ್ಟು ಬೇಗ ನಿಮ್ಮ ಕ್ಷೇತ್ರದಲ್ಲಿ ಬರುವ ಒಂದು ಹಳ್ಳಿಯನ್ನು ಆಯ್ಕೆ ಮಾಡಿ ಮಾಹಿತಿ ನೀಡುತ್ತೇವೆ ಎಂದರು.

ತೇಜಸ್ವೀ ಸೂರ್ಯ ಹೇಳಿದ್ದೇನು?
ಮಿಥುನ್ ಅಣ್ಣ, ನೀವು ನನ್ನಂಥ ಲಕ್ಷಾಂತರ ಮಂದಿ ಯುವಕರಿಗೆ ಸ್ಫೂರ್ತಿ. ದಿವಂಗತ ಅನಂತ್‍ಕುಮಾರ್ ಅವರು ರಾಗಿಹಳ್ಳಿ ಗ್ರಾಮದಲ್ಲಿ ಅದ್ಭುತ ಕೆಲಸಗಳನ್ನು ಮಾಡಿದ್ದಾರೆ. ನಾವು ಅವರ ಹಾದಿಯಲ್ಲೇ ನಡೆದು ಮುಂದುವರಿಸಿಕೊಂಡು ಹೋಗಬೇಕು ಎಂದು ಟ್ವೀಟ್ ಮಾಡಿ ಗ್ರಾಮ ಸ್ವರ್ಗ ಅಭಿಯಾನ ಚಾಲೆಂಜ್ ಸ್ವೀಕರಿಸಿದ್ದಾರೆ.

ಈದಕ್ಕೆ ಸೂಲಿಬೆಲೆ ಅವರು ಪ್ರತಿಕ್ರಿಯಿಸಿ, ನೀವು ಈ ಚಾಲೆಂಜ್ ಸ್ವೀಕರಿಸುತ್ತೀರ ಎಂದು ನಾನು ಊಹಿಸಿದ್ದೆ. ದಯಮಾಡಿ ನಿಮ್ಮ ಕ್ಷೇತ್ರದಲ್ಲಿ ಬರುವ ಯಾವುದಾದರು ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಅಲ್ಲಿ ನಮ್ಮ ಜೊತೆ ಯುವಕರು ಹಾಗೂ ಮಹಿಳೆಯರು ಕೈಜೋಡಿಸಿ ಆ ಸ್ಥಳವನ್ನು ಕಸ ಮುಕ್ತ ಪ್ರದೇಶ ಮಾಡೋಣ. ಅದು ಬೆಂಗಳೂರಿಗಾಗಿ ನಮ್ಮ ಯೋಜನೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ತಿಳಿಸಿದ್ದಾರೆ.

ಸೂಲಿಬೆಯವರ ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?
ಶುಕ್ರವಾರ ಚಾಮರಾಜನಗರದ ಕೊಳ್ಳೆಗಾಲ ತಾಲೂಕಿನ ದೊಡ್ಡಾನೆಗೆ ಹೋಗಿದ್ದೆವು. ಏಳೆಂಟು ಕಿಲೋಮೀಟರ್‍ನಷ್ಟು ದೂರ ಗುಡ್ಡ ಹತ್ತಿದ ನಂತರ ಸಿಗುವ ಹಳ್ಳಿಯದು. ಅಕ್ಷರಶಃ ಗ್ರಾಮ ಎನ್ನುವುದನ್ನು ಚಿತ್ರೀಕರಿಸಬಹುದಾಗಿರುವಂತಹ ಹಳ್ಳಿಯದು. ಈ ಹಳ್ಳಿಗೆ ರಸ್ತೆಯಿಲ್ಲ. ವಿದ್ಯುತ್ ಇತ್ತೀಚೆಗೆ ಬಂದಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಏಕೋಪಾಧ್ಯಾಯ ಶಾಲೆ ಇಲ್ಲಿಯದ್ದು. ವೈದ್ಯಕೀಯ ವ್ಯವಸ್ಥೆಗಳು ಇಲ್ಲಿಲ್ಲ. ಕೊನೆಗೆ ದಿನಸಿ ವಸ್ತುಗಳು ಬೇಕೆಂದರೂ ಸುಮಾರು 15 ಕಿ.ಮೀ ನಡೆದು ತಂದುಕೊಳ್ಳಬೇಕಾದ ಪರಿಸ್ಥಿತಿ. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಈ ಬಗೆಯ ಹಳ್ಳಿಗಳು ಇರುವುದು ನಿಜಕ್ಕೂ ದುರಂತ.

https://www.facebook.com/TeamModi.chakravarty.sulibele.7/posts/2681836788553693

ಸರ್ಕಾರದ ಯೋಜನೆಗಳನ್ನು ಸರಿಯಾಗಿ ತಲುಪಿಸಿದರೂ ಈ ಹಳ್ಳಿ ಈಗಿರುವುದಕ್ಕಿಂತಲೂ ಎಷ್ಟೋ ಪಾಲು ಚೆನ್ನಾಗಿರಬೇಕಿತ್ತು. ಹಾಗಂತ ಇದು ಸರ್ಕಾರದ್ದಷ್ಟೇ ಕೆಲಸವಲ್ಲ. ಏಳು ದಶಕಗಳಲ್ಲಿ ವಿಕಾಸದ ಎಲ್ಲ ಆನಂದವನ್ನು ಸವಿದ ನಾವು ಈ ಗ್ರಾಮದ ಅಭಿವೃದ್ಧಿಗೆ ಹೆಗಲು ಕೊಡಬೇಕಾಗಿದೆ. ಯುವಾಬ್ರಿಗೇಡ್ ಗ್ರಾಮಸ್ವರ್ಗ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಜಾತಿ ಮುಕ್ತ, ರಾಜಕೀಯ ಮುಕ್ತ, ವ್ಯಾಜ್ಯ ಮುಕ್ತ, ಹೊಗೆ ಮುಕ್ತ, ಅನಾರೋಗ್ಯ ಮುಕ್ತ, ಸ್ವಾವಲಂಬಿ, ಸದೃಢ ಮತ್ತು ತೃಪ್ತಿಯಿಂದ ಕೂಡಿದ ಸ್ವರ್ಗಸಮಾನ ಹಳ್ಳಿಗಳ ನಿರ್ಮಾಣಕ್ಕೆ ನಾವು ಬದ್ಧರು.

ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಚಾಲೆಂಜ್ ಸ್ವೀಕಾರ ಮಾಡಿದ್ದೇವೆ. ಈಗ ರಾಜ್ಯದ 28 ಸಂಸದರಿಗೆ ಯುವಾಬ್ರಿಗೇಡ್ ಚಾಲೆಂಜ್ ನೀಡುತ್ತಿದೆ. ತಮ್ಮ ಕ್ಷೇತ್ರದ ಒಂದಾದರೂ ಹಳ್ಳಿಯನ್ನು ಹೀಗೆ ಸ್ವರ್ಗವಾಗಿ ರೂಪಿಸಬಲ್ಲಿರೇ? ದಯಮಾಡಿ ನಿಮ್ಮ ನಿಮ್ಮ ಪ್ರತಿನಿಧಿಗಳಿಗೆ ಈ ಚಾಲೆಂಜ್ ಮುಟ್ಟುವಂತೆ ನೋಡಿಕೊಳ್ಳಿ. ಮುಂದಿನ ಒಂದು ವರ್ಷದಲ್ಲಿ ಅವರು ಆಯ್ದುಕೊಂಡ ಹಳ್ಳಿಯ ಬೆಳವಣಿಗೆ ಮತ್ತು ಯುವಬ್ರಿಗೇಡ್ ಕೈಗೆತ್ತಿಕೊಂಡಿರುವ ಸವಾಲು ಎರಡನ್ನೂ ತುಲನೆ ಮಾಡಿ ನೋಡೋಣ. ಮುಂದಿನ ಚುನಾವಣೆಗೂ ಮುನ್ನ ಇದೇ ಗೆಲುವಿನ ಮಾನದಂಡವಾಗಲಿ.

ಮಿತ್ರರೇ ಪ್ರತಿನಿಧಿಗಳು ಕೆಲಸ ಮಾಡಲಿಲ್ಲವೆಂದು ಐದು ವರ್ಷದ ನಂತರ ಕೊರಗಬೇಡಿ. ಮೊದಲ ದಿನದಿಂದಲೂ ಮೈಬಗ್ಗಿಸಿ ದುಡಿಯುವಂತೆ ಅವರಿಗೆ ಅನಿವಾರ್ಯತೆಯನ್ನು ಸೃಷ್ಟಿಸಿ.

https://www.facebook.com/TeamModi.chakravarty.sulibele.7/posts/2680161655387873

ದೊಡ್ಡಾನೆಗೆ ಹೋಗುವಾಗ ದಾರಿಯಲ್ಲಿ ಜ್ವರ ಬಂದಿದೆ ಎಂದು ಗುಡ್ಡದ ಕೆಳಗಿರುವ ವೈದ್ಯರಿಗೆ ತೋರಿಸಲು ಹೋಗುತ್ತಿದ್ದೇನೆ ಎಂದು ಹೇಳಿದ ಅಜ್ಜಿಯೊಬ್ಬರು ಸಿಕ್ಕಿದರು. ನಮ್ಮ ಹಿಂದೆ ಬರುತ್ತಿದ್ದ ತಂಡ ಆಕೆ ಬಿಸಿಲಿನಲ್ಲಿ ರಸ್ತೆಯ ಮೇಲೆ ಮಲಗಿಕೊಂಡಿರುವುದನ್ನು ನೋಡಿತು. ಏಕೆಂದರೆ ಜ್ವರದಿಂದ ನಡೆಯಲೂ ಕಷ್ಟವಾಗಿರುವಾಗ ಆಕೆ ಸುದೀರ್ಘವಾದ ಗುಡ್ಡ ಇಳಿಯಬೇಕಿತ್ತು. ಹಾಗೆ ದಣಿವಾರಿಸಿಕೊಳ್ಳುತ್ತಿರುವಾಗ ಕೆಳಗಿನಿಂದ ಮಗುವಿಗೆ ಸೂಜಿ ಚುಚ್ಚಿಸಿಕೊಂಡು ಬರುತ್ತಿದ್ದ ತಂದೆಯೊಬ್ಬ ಕಂಡ. ಈ ದೃಶ್ಯ ನೋಡಿ ನಾವು ಕೊಳ್ಳೆಗಾಲಕ್ಕೆ ಬಂದು ಜನನಿ ನರ್ಸಿಂಗ್ ಹೋಮ್‍ನ ಮಿತ್ರರಾದ ಪ್ರವೀಣ್‍ರನ್ನು ಮಾತನಾಡಿಸಿದೆವು. ಅವರು ಅಲ್ಲಿ ಮೆಡಿಕಲ್ ಕ್ಯಾಂಪ್ ನಡೆಸುವ ಭರವಸೆ ಕೊಟ್ಟಿದ್ದಾರೆ.

ಅದಾಗಲೇ ಅನೇಕರು ಕರೆ ಮಾಡಿ ಆ ಹಳ್ಳಿಯಲ್ಲಿ ನಮ್ಮ ಸಹಕಾರ ಏನು ಬೇಕು ಎಂದು ಕೇಳಲು ಆರಂಭಿಸಿದ್ದಾರೆ. ಪೂರ್ಣಾವಧಿಯಾಗಿ ಅಲ್ಲಿಯೇ ಇರಲು ಮುಂದೆ ಬರುತ್ತಿದ್ದಾರೆ. ನಮ್ಮ ಕೆಲಸ ಶುರುವಾಯ್ತು. ಇನ್ನು ನಿಮ್ಮ ಪ್ರತಿನಿಧಿಗಳಿಗೆ ನೀವೀಗ ಕಿವಿ ಹಿಂಡಬೇಕಿದೆ ಅಷ್ಟೇ.

Comments

Leave a Reply

Your email address will not be published. Required fields are marked *