ಜಯಮಾಲಾ ವೆರಿ ಗ್ಲ್ಯಾಮರಸ್ ಮಿನಿಸ್ಟರ್- ಬಾಯಿತುಂಬಾ ಹೊಗಳಿದ ಪ್ರಮೋದ್ ಮಧ್ವರಾಜ್

ಉಡುಪಿ: ಸ್ಥಳೀಯ ಚುನಾವಣೆ ಪ್ರಚಾರದಲ್ಲಿ ಜಯಮಾಲಾ ಗಾಳಿ ಎದ್ದಿದೆ. ಜಯಮಾಲಾರಷ್ಟು ಗ್ಲಾಮರ್ ಯಾರಿಗಿದೆ ಹೇಳಿ? ಶಿ ಈಸ್ ವೆರಿ ಗ್ಲ್ಯಾಮರಸ್ ಡಿಸ್ಟ್ರಿಕ್ಟ್ ಮಿನಿಸ್ಟರ್ ಎಂದು ಮಾಜಿ ಶಾಸಕ ಪ್ರಮೋದ್ ಮಧ್ವರಾಜ್ ಜಯಮಾಲಾರನ್ನು ಹೊಗಳಿದ್ದಾರೆ.

ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಉಡುಪಿಯ ಪ್ರೆಸ್ ಕ್ಲಬ್‍ನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸಚಿವೆ ಜಯಮಾಲಾರನ್ನು ಹಾಡಿಹೊಗಳಿದರು. ಚುನಾವಣೆಗೆ ಜಿಲ್ಲೆಯಾದ್ಯಂತ ಹೆಚ್ಚು ಓಡಾಟ ನಡೆಸದಿದ್ದರೂ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಜಯಮಾಲಾ ಗಾಳಿ ಎದ್ದಿದೆ. ಒಂದೇ ದಿನದ ಪ್ರಚಾರವೇ ಸಾಕಷ್ಟು ಪರಿಣಾಮ ಬೀರಿದೆ. ಜಯಮಾಲಾ ನನಗಿಂತ ಹೆಚ್ಚಾಗಿ ಗ್ಲಾಮರ್ ಇದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಅಳಿವು ಉಳಿವಿನ ಪ್ರಶ್ನೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಧ್ವರಾಜ್, ಕಾಂಗ್ರೆಸ್ ಪಕ್ಷ ಆನೆ ಇದ್ದ ಹಾಗೆ, ಆನೆಯ ಚಿತ್ರ ಎಷ್ಟೇ ಚಿಕ್ಕದಾಗಿ ಬರೆದರೂ ಅದು ಆನೆಯೇ. ಸೂರ್ಯ ಚಂದ್ರರು ಇರುವವರೆಗೂ ಕಾಂಗ್ರೆಸ್ ಪಕ್ಷ ಸದೃಢವಾಗಿರುತ್ತದೆ. ಹಿಂದೂ, ಸನಾತನ ಧರ್ಮ ಹೇಗೆ ಪುರಾತನವೋ ಹಾಗೇ ಕಾಂಗ್ರೆಸ್ ಪಕ್ಷವೂ ಹಾಗೆ ಪ್ರಾಚೀನವಾದ ಪಕ್ಷ. ಕಾಂಗ್ರೆಸ್ ಪಕ್ಷವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್ ಬಿಟ್ಟರೂ ಕಾಂಗ್ರೆಸ್ ಪಕ್ಷ ಉಳಿಯುತ್ತೆ. ಯಾರೂ ಇಲ್ಲದಿದ್ದರೂ ಕಾಂಗ್ರೆಸ್ ಪಕ್ಷವನ್ನು ಮುಕ್ತ ಮಾಡಲು ಅಸಾಧ್ಯ. ಹಾಗಂತ ನಾನು ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ. ಚುನಾವಣಾ ವಾತಾವರಣ ಕಾಂಗ್ರೆಸ್ ಪರವಾಗಿದೆ. ಬಿಜೆಪಿ ಶಾಸಕರ ಹಣೆಬರಹ ಏನಂತ ಜನಕ್ಕೆ ನಾಲ್ಕು ತಿಂಗಳಲ್ಲಿ ಗೊತ್ತಾಗಿದೆ. ಯಾವುದೇ ಕೆಲಸ ಈ ಅವಧಿಯಲ್ಲಿ ಆಗಿಲ್ಲ ಎಂದು ಶಾಸಕ ರಘುಪತಿ ಭಟ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನು ಓದಿ: ಮೋದಿ ಕರ್ನಾಟಕದ ಜನಕ್ಕೇನು ಮಾಡಿದ್ದಾರೆ? ಜಯಮಾಲಾ ಪ್ರಶ್ನೆ

ಉಡುಪಿ ನಗರಸಭೆ ಕಳೆದ 5 ವರ್ಷ ಕಾಂಗ್ರೆಸ್ ಕೈಯಲ್ಲಿ ಇತ್ತು. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಹಿನ್ನಡೆಯಾಯಿತು. ಆದರೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯವನ್ನು ಜನ ಮೆಚ್ಚಿಕೊಂಡಿದ್ದಾರೆ. ನಗರಸಭೆ ವಿರುದ್ಧ ಪ್ರತಿಭಟನೆ ಮಾಡಲು ಬಿಜೆಪಿಗೆ ಆಸ್ಪದವೇ ಇರಲಿಲ್ಲ. ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡಿದ್ದೇವೆ. ಈ ಬಾರಿ ಮತ್ತೆ ಜನ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಧ್ವರಾಜ್ ಹೇಳಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *