ಸುಪ್ರೀಂಕೋರ್ಟ್ ಜೀವಂತವಿದ್ದರೆ ಪೌರತ್ವ ಕಾಯ್ದೆಯನ್ನು ಸಮುದ್ರಕ್ಕೆಸೆಯಲಿ- ಪ್ರಮೋದ್ ಮಧ್ವರಾಜ್

ಉಡುಪಿ: ಸುಪ್ರೀಂಕೋರ್ಟ್ ಜೀವಂತವಿದ್ದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಸಮುದ್ರಕ್ಕೆ ಎಸೆಯಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವಿರೋಧಿ, ದೇಶ ವಿರೋಧಿ, ಸಂವಿಧಾನ ವಿರೋಧಿ, ಎನ್‍ಆರ್‍ಸಿ ಹಾಗೂ ಸಿಎಎ ತರುವ ಮೂಲಕ ಬಿಜೆಪಿ ಭಾರತಕ್ಕೆ ಬೆಂಕಿ ಇಡುತ್ತಿದೆ. ಭಾರತದಲ್ಲಿ 130 ಕೋಟಿ ಜನರೂ ಸಮಾನರು. ದೇಶದ ಧರ್ಮೀಯರಲ್ಲಿ ಬೇಧ ಭಾವ ಮಾಡಕೂಡದು. ಸಂವಿಧಾನದಲ್ಲಿ ಧಾರ್ಮಿಕ ವಿಭಜನೆಗೆ ಅವಕಾಶವಿಲ್ಲ ಎಂದು ಹೇಳಿದರು.

ಈ ಎರಡು ಕಾಯ್ದೆಯ ಮೂಲಕ ಬಿಜೆಪಿ ಈ ದೇಶಕ್ಕೆ ಬೆಂಕಿ ಇಡುತ್ತಿದೆ. ಜನ ಬೀದಿಗಿಳಿದು ಘರ್ಷಣೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಸರ್ಕಾರ ಆರ್ಥಿಕವಾಗಿ ಭಾರತವನ್ನು ನಿರ್ಣಾಮ ಮಾಡಿಯಾಗಿದೆ. ಇದೀಗ ಬಾಂಗ್ಲಾದೇಶದ ಅರ್ಧದಷ್ಟು ಜಿಡಿಪಿಗೆ ಭಾರತ ಇಳಿದಿದೆ. ಇಂದಿರಾ ಗಾಂಧಿ ಕಟ್ಟಿದ ಬಾಂಗ್ಲಾದೇಶ ಸುಭದ್ರ ಆಗಿದೆ. ಭಾರತದ ಆರ್ಥಿಕ ತಳಹದಿಯೇ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡುವ ಕಾಲ ಬಂದಿದೆ, ಮಹಾನ್ ನಾಯಕರು ಎಂದು ಕರೆಸಿಕೊಂಡವರು ಭಾರತವನ್ನು ಛಿದ್ರ ಛಿದ್ರ ಮಾಡಲು ಹೊರಟಿದ್ದಾರೆ. ಬಿಜೆಪಿಗೆ ಅಧಿಕಾರ ಮಾಡುವ ಹಕ್ಕಿಲ್ಲ, ಸುಪ್ರೀಂ ಕೋರ್ಟ್ ಪೌರತ್ವ ಕಾಯ್ದೆಯನ್ನು ಬದಿಗೆ ಹಾಕಬೇಕು- ಬಿಜೆಪಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಮಧ್ವರಾಜ್ ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *