‘ವಾಟ್ಸಪ್ ಯೂನಿವರ್ಸಿಟಿ’ ಟೀ ಶರ್ಟ್ ಧರಿಸಿ ‘ಮುಸ್ತಾಫಾ’ ಸಿನಿಮಾ ನೋಡಿದ ಪ್ರಕಾಶ್ ರೈ

ಘೀರ ಸಿನಿಮಾದ ಚಿತ್ರೀಕರಣಕ್ಕಾಗಿ ಬೆಂಗಳೂರಿನಲ್ಲಿ ಬೀಡುಬಿಟ್ಟಿದ್ದ ಕನ್ನಡದ ಹೆಮ್ಮೆಯ ನಟ ಪ್ರಕಾಶ್ ರೈ (Prakash Raj) ಮೊನ್ನೆಯಷ್ಟೇ ಡೇರ್ ಡೆವಿಲ್ ಮುಸ್ತಾಫಾ (Dare Devil Mustafa) ಸಿನಿಮಾ ನೋಡಿದ್ದಾರೆ. ಈ ಸಿನಿಮಾ ವೀಕ್ಷಣೆಗೆ ಬಂದಾಗ ‘ವಾಟ್ಸಪ್ ಯೂನಿವರ್ಸಿಟಿ’ (Whatsapp University) ಎಂದು ಎದೆಯ ಮೇಲೆ ಬರೆಯಲಾಗಿದ್ದ ಟೀ ಶರ್ಟ್ ಧರಿಸಿಕೊಂಡು ಬಂದಿದ್ದಾರೆ. ಇದೀಗ ಆ ಫೋಟೋ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

ಬಿಜೆಪಿ ಮತ್ತು ಅಂಗ ಸಂಸ್ಥೆಗಳ ಪರವಾಗಿ ಮಾತನಾಡುವವರನ್ನು ಮತ್ತು ಹಿಂದೂಪರ ಹೋರಾಟಗಾರರ ಬಗ್ಗೆ ಮಾತನಾಡುವವರಿಗೆ ವಾಟ್ಸಪ್ ಯೂನಿವರ್ಸಿಟಿ ಸ್ಟೂಡೆಂಟ್ ಎಂದು ಗೇಲಿ ಮಾಡಲಾಗುತ್ತಿದೆ. ಇವರನ್ನು ಗೇಲಿ ಮಾಡಲೆಂದೇ ಪ್ರಕಾಶ್ ರೈ ಆ ರೀತಿಯ ಟೀ ಶರ್ಟ್ ಧರಿಸುತ್ತಾರೆ. ಸಿನಿಮಾ ನೋಡಲು ಬಂದಾಗಲೂ ಅದೇ ಟೀ ಶರ್ಟ್ ಧರಿಸಿ ಬಂದಿದ್ದರು. ಇದೀಗ  ಆ ಫೋಟೋ ವೈರಲ್ ಕೂಡ ಆಗಿದೆ.

ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ ನೋಡಿದ ನಂತರ ಚಿತ್ರತಂಡವನ್ನು ಪ್ರಕಾಶ್ ರೈ ಹಾಡಿ ಹೊಗಳಿದ್ದಾರೆ. ಕಲಾವಿದರನ್ನು ತಬ್ಬಿಕೊಂಡು ಅಭಿನಂದಿಸಿದ್ದಾರೆ. ಜನರ ಮನಸ್ಸು ಬೆಸೆಯುವಂತಹ ಇಂತಹ ಚಿತ್ರಗಳು ಇನ್ನೂ ಅನೇಕ ಬರಲಿ ಎಂದು ಮಾತನಾಡಿದ್ದಾರೆ. ಇಷ್ಟೆಲ್ಲ ಮಾತುಗಳನ್ನು ಹೇಳಿದ ಪ್ರಕಾಶ್ ರೈ ಅವರ ಟೀ ಶರ್ಟ್ ಮಾತ್ರ  ಪಾಸಿಟಿವ್ ಮತ್ತು ನೆಗೆಟಿವ್ ಕಾಮೆಂಟ್ ಗೆ ಗುರಿಯಾಗಿದೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಸ್ಯಾಂಡಲ್‌ವುಡ್‌ಗೆ ಎಂಟ್ರಿ

ಪೂರ್ಣಚಂದ್ರ ತೇಜಸ್ವಿಯವರ ಕಥೆಯಾಧಾರಿತ ಈ ಚಿತ್ರವನ್ನು ಶಶಾಂಕ್ ಸೋಗಾಲ್ (Shashank Sogal) ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೇ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ನಿರ್ಮಿಸಿದ್ದಾರೆ. ನಟರಾಕ್ಷಸ ಡಾಲಿ ಧನಂಜಯ್ ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ಅರ್ಪಿಸಿದ್ದು, ಕೆ ಆರ್ ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ಚಿತ್ರವನ್ನು ವಿತರಿಸಿದೆ.

ರಾಹುಲ್‌ ರಾಯ್‌ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಅಭಯ್‌, ಸುಪ್ರೀತ್‌ ಭಾರದ್ವಾಜ್‌, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ಮೈಸೂರ್‌ ಆನಂದ್‌, ಸುಂದರ್‌ ವೀಣಾ, ನಾಗಭೂಷಣ್‌, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಈ ಸಿನಿಮಾದ ಭಾಗವಾಗಿದ್ದಾರೆ. ಸಿನಿಮಾಮರ ಬ್ಯಾನರ್‌ನಲ್ಲಿ ಡೇರ್ ಡೆವಿಲ್ ಮುಸ್ತಾಫಾ ನಿರ್ಮಾಣವಾಗಿದೆ.