ಯುವ ಬ್ಯಾಡ್ಮಿಂಟನ್ ಪ್ರತಿಭೆಗಳ ತರಬೇತಿಗೆ ಇನ್ಫೋಸಿಸ್ 16 ಕೋಟಿ ರೂ. ನೆರವು

ಬೆಂಗಳೂರು: ಯುವ ಪ್ರತಿಭೆಗಳಿಗೆ ಬ್ಯಾಡ್ಮಿಂಟನ್ ತರಬೇತಿ ನೀಡುತ್ತಿರುವ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯೊಂದಿಗೆ ಇನ್ಫೋಸಿಸ್ 16 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ.

ಇನ್ಫೋಸಿಸ್‍ನ ಕಾರ್ಪೊರೇಟ್ ಹೊಣೆಗಾರಿಗೆ ವಿಭಾಗವಾಗಿರುವ ಇನ್ಫೋಸಿಸ್ ಫೌಂಡೇಶನ್ ಪ್ರಕಾಶ್ ಪಡುಕೋಣೆ ಅವರ ಅಕಾಡೆಮಿಯೊಂದಿಗೆ 5 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ 25 ವರ್ಷಗಳನ್ನು ಪೂರೈಸಿದ್ದು, ಇಲ್ಲಿ ತರಬೇತಿ ಪಡೆದ ಹಲವು ಯುವ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಅಕಾಡೆಮಿಯಲ್ಲಿ ತರಬೇತಿ ಪಡೆಯಲಿರುವ ಯುವ ಸಮುದಾಯಕ್ಕೆ ನೆರವಾಗುವ ಉದ್ದೇಶದಿಂದ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಹೊಸ ಪ್ರತಿಭೆಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಲು ತರಬೇತಿ ಹಾಗೂ ನೆರವು ನೀಡಲು ಸಹಕಾರಿಯಾಗುತ್ತದೆ.

ಇನ್ಫೋಸಿಸ್‍ನ ಈ ಕಾರ್ಯಕ್ರಮಕ್ಕೆ ಇನ್ಫೋಸಿಸ್ ಫೌಂಡೇಶನ್ ಪಿಪಿಬಿಎ ಚಾಂಪಿಯನ್ ನರ್ಚರಿಂಗ್ ಪ್ರೋಗ್ರಾಂ ಎಂದು ಹೆಸರಿಸಲಾಗಿದೆ. 2019 ಅಕ್ಟೋಬರ್ ನಿಂದ ಆರಂಭವಾಗುವ ಈ ಕಾರ್ಯಕ್ರಮ ಮುಂದಿನ 5 ವರ್ಷಗಳ ಕಾಲ ನಡೆಯಲಿದೆ. ಅಕಾಡೆಮಿಯಲ್ಲಿ ಪ್ರತಿ ವರ್ಷ 65 ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಗುರಿಯನ್ನು ಕಾರ್ಯಕ್ರಮ ಹೊಂದಿದೆ.

ಈ ಕಾರ್ಯಕ್ರಮದಿಂದ ಭಾರತದಲ್ಲಿ ಮುಂದಿನ 10 ವರ್ಷಗಳ ಬ್ಯಾಡ್ಮಿಂಟನ್ ನಲ್ಲಿ ಯುವ ಪ್ರತಿಭೆಗಳು ರಾರಾಜಿಸಲಿದ್ದಾರೆ. ಅದರಲ್ಲೂ ದೇಶದ 2 ಮತ್ತು 3 ದರ್ಜೆಯ ನಗರ, ಹಳ್ಳಿ ಪ್ರದೇಶಗಳಿಂದ ನಾವು ಯುವ ಆಟಗಾರರನ್ನು ಆಯ್ಕೆ ಮಾಡಿ ತರಬೇತಿ ನೀಡುತ್ತಿದ್ದೇವೆ. ಇನ್ಫೋಸಿಸ್ ನೆರವಿನಿಂದ ಸಂಸ್ಥೆ ಮತ್ತಷ್ಟು ಪ್ರತಿಭೆಗಳಿಗೆ ತರಬೇತಿ ನೀಡಲಿದೆ ಎಂದು ಪ್ರಕಾಶ್ ಪಡುಕೋಣೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸುಧಾ ಮೂರ್ತಿ ಅವರು, ನಮ್ಮ ಭಾರತದ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಸಾಧನೆ ಮಾಡಬೇಕಿದೆ. ವಿಶ್ವಮಟ್ಟದ ತರಬೇತಿ ನೀಡುವ ಮೂಲಕ ಯುವ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರ್ಯಕ್ರಮ ಇದಾಗಿದ್ದು, ಬೆಂಬಲದ ಕೊರತೆ ಎದುರಿಸುತ್ತಿದ್ದ ಕ್ರೀಡಾಪಟುಗಳಿಗೆ ಇದು ನೆರವಾಗಲಿದೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *