ಕೊನೆಗೂ ಪ್ರಜ್ವಲ್‌ ರೇವಣ್ಣ ಬಂಧನ: ಎಸ್‌ಐಟಿ ಮುಂದಿನ ತನಿಖೆ ಪ್ರಕ್ರಿಯೆ ಏನು?

– ತಂದೆ ರೇವಣ್ಣ ಇದ್ದ ಕೊಠಡಿಯಲ್ಲೇ ಪ್ರಜ್ವಲ್‌ ವಾಸ್ತವ್ಯಕ್ಕೆ ವ್ಯವಸ್ಥೆ

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರನ್ನು ಕೊನೆಗೂ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Bengaluru Air Port) ಬಂಧಿಸಲಾಗಿದೆ. ದೇವನಹಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್‌ 2ಗೆ ಆಗಮಿಸುತ್ತಲೇ ಇಮಿಗ್ರೇಷನ್‌ ಅಧಿಕಾರಿಗಳು ವಿಚಾರಣೆ ನಡೆಸಿ, ಸಂಸದರನ್ನು ಎಸ್‌ಐಟಿ ಅಧಿಕಾರಿಗಳಿಗೆ ವಹಿಸಿದ್ದಾರೆ.

ಸದ್ಯ ಪ್ರಜ್ವಲ್‌ ಅವರನ್ನ ಬೆಂಗಳೂರಿನ ಎಸ್‌ಐಟಿ ಕಚೇರಿಗೆ ಕರೆತರಲಾಗಿದ್ದು, ಇಂದು ರಾತ್ರಿ ಎಸ್‌ಐಟಿ ಕಚೇರಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ತಂದೆ ಹೆಚ್‌.ಡಿ ರೇವಣ್ಣ ಅವರಿಗೆ ನೀಡಿದ್ದ ಕೊಠಡಿಯಲ್ಲೇ ಪ್ರಜ್ವಲ್‌ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿರುವ ಎಸ್‌ಐಟಿ ಅಧಿಕಾರಿಗಳು,‌ ರೇವಣ್ಣ ಅವರಿಗೆ ನೀಡಿದ್ದ ಹಾಸಿಗೆಯನ್ನೇ ವಿತರಣೆ ಮಾಡಿದ್ದಾರೆ. ಇದನ್ನೂ ಓದಿ: ಅರೆಸ್ಟ್‌ ಬಳಿಕ SIT ಕಚೇರಿಗೆ ಪ್ರಜ್ವಲ್‌ ರೇವಣ್ಣ; ಏರ್‌ಪೋರ್ಟ್‌ನಲ್ಲಿ ಏನೆಲ್ಲಾ ಬೆಳವಣಿಗೆ ಆಯ್ತು? – ಮುಂದೇನು ಕ್ರಮ?

ಎಸ್‌ಐಟಿ ಮುಂದಿನ ತನಿಖೆ ಪ್ರಕ್ರಿಯೆ ಏನು?
ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿಚಾರಣೆಯನ್ನು ಎಸ್‌ಐಟಿ ಅಧಿಕಾರಿಗಳು ಆರಂಭಿಸಲಿದ್ದಾರೆ. ಈಗಾಗಲೇ ಪ್ರಜ್ವಲ್‌ ಅವರು ವಿದೇಶದಿಂದ ತಂದಿದ್ದ ಲಗೇಜ್‌ ಬ್ಯಾಗ್‌ಗಳು ಹಾಗೂ ಅವರ ಮೊಬೈಲನ್ನು ವಶಕ್ಕೆ ಪಡೆದಿದ್ದು ಪರಿಶೀಲಿಸಿದ್ದಾರೆ. ಬೆಳಗ್ಗೆ 8 ಗಂಟೆಯಿಂದ ವಿಚಾರಣೆ ಆರಂಭಿಸುವುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಕೇಸ್: ಇದುವರೆಗೆ ಏನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಡಿಟೇಲ್ಸ್….

ಮೊದಲಿಗೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಮೂರು ಅತ್ಯಾಚಾರ ಪ್ರಕರಣಗಳ ಸಂಬಂಧ ವಿಡಿಯೋ ಹೇಳಿಕೆಗಳನ್ನು ದಾಖಲಿಸಿಳ್ಳುವ ಸಾಧ್ಯತೆಯಿದೆ. ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಎಲ್ಲ ಸ್ಥಳಗಳಲ್ಲಿನ ಪ್ರಜ್ವಲ್‌ ರೇವಣ್ಣನಿಗೆ ಸಂಬಂಧಿಸಿದಂತಹ ಎಲ್ಲ ವಸ್ತುಗಳನ್ನು ಹಾಗೂ ಪ್ರಜ್ವಲ್ ವಿದೇಶದಿಂದ ಬರುವಾಗ ತಂದಿದ್ದ ವಸ್ತುಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಅವರು ಬಳಸ್ತಿದ್ದ ಮೊಬೈಲ್ ಅನ್ನೂ ಎಸ್‌ಐಟಿ ವಶಕ್ಕೆ ಪಡೆದಿದೆ. ನಾಳೆ ಪ್ರಾಥಮಿಕ ಹಂತದ ವಿಚಾರಣೆ ನಡೆಸಲಿದ್ದು, ನಂತರ ಮೆಡಿಕಲ್ ಟೆಸ್ಟ್ ಮಾಡಿಸುವಂತಹ ಸಾಧ್ಯತೆಯಿದೆ. ಈಗಾಗಲೇ ಪ್ರಜ್ವಲ್ ರೇವಣ್ಣರನ್ನ ವಿಚಾರಣೆ ಮಾಡುವ ಬಗ್ಗೆ ಅಧಿಕಾರಿಗಳು ಚರ್ಚೆ ನಡಸಿದ್ದಾರೆ. ಎಸ್‌ಪಿಪಿ ಜಗದೀಶ್ ಹಾಗೂ ತನಿಖಾ ತಂಡವು ಎರಡು ಆಯಾಮಗಳಲ್ಲಿ ಪ್ರಶ್ನೆಗಳನ್ನ ತಯಾರು ಮಾಡಿಕೊಂಡಿದೆ. ಇನ್ನು ತನಿಖಾ ಹಂತದಲ್ಲಿ ತಲೆಮರೆಸಿಕೊಂಡಿದ್ದ ಬಗ್ಗೆಯೂ ಪ್ರಶ್ನೆ ಮಾಡಲಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ, ಬಿಎಸ್‌ವೈ ಪ್ಲ್ಯಾನ್‌ ಮಾಡಿಯೇ ಪ್ರಜ್ವಲ್‌ನ ವಿದೇಶಕ್ಕೆ ಕಳುಹಿಸಿದ್ದರು: ನಲಪಾಡ್‌ ಆರೋಪ

ಸದ್ಯ ಈಗಾಗಲೇ ವಶಕ್ಕೆ ಪಡೆದಿರುವ ಪ್ರಜ್ವಲ್‌ ರೇವಣ್ಣ ಅವರ ಮೊಬೈಲ್‌ ಅನ್ನು ಶುಕ್ರವಾರವೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ. ಜೊತೆಗೆ ಧ್ವನಿ ಮಾದರಿಗಳನ್ನು ಪರೀಕ್ಷೆ ನಡೆಸಲಿದ್ದಾರೆ. ಮಧ್ಯಾಹ್ನದ ವೇಳೆಗೆ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ ಬಳಿಕ ಕೋರ್ಟ್‌ ಮುಂದೆ ಹಾಜರುಪಡಿಸಲಿದ್ದಾರೆ. ತನಿಖೆ ಸಾಕಷ್ಟು ಬಾಕಿಯಿರುವ ಕಾರಣ ಪೊಲೀಸ್‌ ಕಸ್ಟಡಿಗೆ ಪಡೆಯಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂದಿನ ವಿಚಾರಣೆ ಬಳಿಕವೇ ಮಾಹಿತಿಗಳು ಹೊರಬೀಳಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.