ತೀರ್ಥಕ್ಷೇತ್ರಗಳಿಗೆ ಪಾದಯಾತ್ರೆ ಕೈಗೊಂಡ ಪ್ರಜ್ವಲ್, ನಿಖಿಲ್

ಹಾಸನ/ಚಾಮರಾಜನಗರ: ಶಿವರಾತ್ರಿ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.

ಇಂದು ಪ್ರಜ್ವಲ್ ರೇವಣ್ಣ ಅವರು ಹೊಳೆನರಸೀಪುರದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಹೋಳೆನರಸಿಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ಹುಟ್ಟೂರು ಹರದನಹಳ್ಳಿಗೂ ಹೋಗಿ ಮನೆದೇವರಿಗೆ ಪೂಜೆ ನೆರವೇರಿಸಿದರು. ಇವರು ಹಾಸನ, ಆಲೂರು, ಸಕಲೇಶಪುರ, ಶಿರಾಡಿಘಾಟ್ ಮಾರ್ಗವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.

ಎಲ್ಲಾ ತಾಲೂಕುಗಳಿಂದಲೂ ಬರುವ ಭಕ್ತರೊಟ್ಟಿಗೆ ಪಾದಯಾತ್ರೆ ನಡೆಸುತ್ತಾರೆ. ಪಾದಯಾತ್ರೆ ಮೂಲಕವಾಗಿಯೇ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆಯಲಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಪಕ್ಷದ ಜಲಧಾರೆ ಸೇರಿದಂತೆ ಜನಪರ ಕಾರ್ಯಗಳಿಗೆ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ: ಇತ್ತ ಮಹದೇಶ್ವರ ಬೆಟ್ಟಕ್ಕೆ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ನಾಳೆ ಹನೂರು ತಾಲೂಕು ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಆರಂಭಿಸಲಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು 21 ಕಿಮೀ ಕಾಲ್ನಡಿಗೆ ಮೂಲಕ ತೆರಳಲಿದ್ದಾರೆ.  ಇದನ್ನೂ ಓದಿ: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಮೊದಲ ವ್ಯಕ್ತಿ ಡಿ.ಕೆ ಶಿವಕುಮಾರ್: ಕೆ.ಎಸ್ ಈಶ್ವರಪ್ಪ

ಕಾಂಗ್ರೆಸ್‍ನ ಮೇಕೆದಾಟು ಪಾದಯಾತ್ರೆ ವೇಳೆಯಲ್ಲೇ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಶಿವರಾತ್ರಿ ಪಾದಯಾತ್ರೆ ಕೈಗೊಂಡಿದ್ದಾರೆ. ಇದು ಕಾಂಗ್ರೆಸ್ ಪಾದಯಾತ್ರೆಗೆ ಪರ್ಯಾಯವಾಗಿ ಜೆಡಿಎಸ್ ಯುವ ನಾಯಕರ ಶಿವರಾತ್ರಿ ಪಾದಯಾತ್ರೆಯಾಗಿದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಪ್ರಜ್ವಲ್, ನಿಖಿಲ್ ನಡೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಬುಲೆಟ್ ಬೈಕ್‍ಗೆ ಗುದ್ದಿದ ಕಾರ್ – ಇಬ್ಬರು ಯುವ ಟೆಕ್ಕಿಗಳು ದುರ್ಮರಣ

Comments

Leave a Reply

Your email address will not be published. Required fields are marked *