ಮೇ 31ಕ್ಕೆ ಪ್ರಜ್ವಲ್ ವಾಪಸ್- ಮ್ಯೂನಿಕ್‍ನಿಂದ ಬೆಂಗಳೂರಿಗೆ ಟಿಕೆಟ್ ಬುಕ್

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅವರು ಮೇ 31ಕ್ಕೆ ಪ್ರಜ್ವಲ್ ರೇವಣ್ಣ (Prajwal Revanna) ಭಾರತಕ್ಕೆ ವಾಪಸ್ ಆಗಲಿದ್ದಾರೆ.

ಈಗಾಗಲೇ ಮ್ಯೂನಿಕ್‍ನಿಂದ ಬೆಂಗಳೂರಿಗೆ ಬರೋಕೆ ಪ್ರಜ್ವಲ್ ರೇವಣ್ಣ ಅವರು ಲುಫ್ತಾನ್ಸಾ ಏರ್‌ಲೈನ್ಸ್ ಬುಕ್ ಮಾಡಿದ್ದಾರೆ. ಮೇ 31ರ ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಅವರು ಬೆಂಗಳೂರಿಗೆ ಬರ್ತಿದ್ದಂತೆ ಏರ್ ಪೋರ್ಟ್‍ನಲ್ಲೇ ಲಾಕ್ ಆಗುವ ಸಾಧ್ಯತೆಗಳಿವೆ. ಎಸ್‍ಐಟಿ ಅಧಿಕಾರಿಗಳು ಏರ್‍ಪೋರ್ಟ್‍ನಲ್ಲಿ ಬಂಧಿಸಲು ಸಜ್ಜಾಗಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಸೋಮವಾರವಷ್ಟೇ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ (SIT) ಮುಂದೆ ಹಾಜರಾಗಿ ಉತ್ತರ ನೀಡುತ್ತೇನೆ. ಅಷ್ಟೇ ಅಲ್ಲದೇ ಕುಟುಂಬಸ್ಥರು ಮತ್ತು ರಾಜ್ಯದ ಜನತೆಯಲ್ಲಿ ಪ್ರಜ್ವಲ್‌ ರೇವಣ್ಣ ಕ್ಷಮೆ ಕೇಳಿದ್ದರು.

ಹೇಳಿಕೆಯಲ್ಲಿ ಏನಿದೆ?: ವಿದೇಶಕ್ಕೆ ಹೋಗುವ ಬಗ್ಗೆ ಮೊದಲೇ ಪ್ಲಾನ್ ಆಗಿತ್ತು. ವಿದೇಶಕ್ಕೆ ಹೋಗುವಾಗ ನನ್ನ ಮೇಲೆ ಯಾವುದೇ ಆರೋಪ ಇರಲಿಲ್ಲ. ನಾನು ವಿದೇಶದಲ್ಲಿದ್ದಾಗ ಯೂಟ್ಯೂಬ್‌ ನ್ಯೂಸ್‌ ನೋಡಿ ನನ್ನ ಮೇಲೆ ಗಂಭೀರ ಆರೋಪ ಬಂದಿರುವುದು ಕಂಡುಬಂದಿದೆ. ಇದಾದ ನಂತರ ನನ್ನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಎಸ್‌ಐಟಿ ನೋಟಿಸ್‌ ನೀಡಿದ ವಿಚಾರ ಗೊತ್ತಾಯಿತು. ನಾನು ರಾಜಕೀಯವಾಗಿ ಬೆಳೆಯಬಾರದು ಎಂಬ ಕಾರಣಕ್ಕೆ ನನ್ನ ಮೇಲೆ ಪಿತೂರಿ ಮಾಡಿದ್ದಾರೆ.

ನನ್ನ ಮೇಲೆ ರಾಜಕೀಯ ಪಿತೂರಿ ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ರಾಹುಲ್‌ ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರ ಆರೋಪದಿಂದ ನಾನು ಮಾನಸಿಕ ಖಿನ್ನತೆಗೆ ಜಾರಿದ್ದೆ. ಈ ಖಿನ್ನತೆಯಿಂದ ಹೊರ ಬರದಲು ಕೆಲ ಸಮಯ ಬೇಕಿತ್ತು. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ಈ ಸುಳ್ಳು ಪ್ರಕರಣದಿಂದ ನಾನು ಹೊರ ಬರುತ್ತೇನೆ. ಬಂದ ಮೇಲೆ ಎಲ್ಲರಿಗೂ ಉತ್ತರ ನೀಡುತ್ತೇನೆ ಎಂದು ಹೇಳಿದ್ದರು.