ಹುಬ್ಬಳ್ಳಿ ಶನಿದೇವಾಲಯಕ್ಕೆ ಪ್ರಧಾನಿ ಮೋದಿ ಸಹೋದರ ಭೇಟಿ

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಪ್ರಮೋದ್ ಮೋದಿ ಅವರು ವಾಣಿಜ್ಯ ನಗರಿ ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ನಗರದ ಶನಿ ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆದಿದ್ದಾರೆ.

ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಪ್ರಮೋದ್ ಮೋದಿ, ಕರ್ನಾಟಕದ ಜನರು ಗುಜರಾತ್ ಜನರಿಗಿಂತ ಹೆಚ್ಚು ಪ್ರೀತಿ ನೀಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಇಲ್ಲಿ ಆಗಮಿಸಿದ್ದೇನೆ. ಇಲ್ಲಿನ ಜನರ ಆತ್ಮೀಯತೆ ಅದ್ಭುತ. ಈ ಹಿಂದೆ ಚುನಾವಣೆಯಲ್ಲೂ ಪ್ರಧಾನಿ ಮೋದಿ ಅವರ ಹೆಸರಿನಲ್ಲಿ ಮತ ನೀಡಿದ್ದಾರೆ. ಇಲ್ಲಿಗೆ ಭೇಟಿ ನೀಡಿಲು ಬಹಳ ಸಂತಸವಾಗುತ್ತದೆ ಎಂದರು.

ಇದೇ ವೇಳೆ ಚಂದ್ರಗ್ರಹಣ ದಿನದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಅದಕ್ಕೂ ನನಗೂ ಸಂಬಂಧವಿಲ್ಲ. ಹುಬ್ಬಳ್ಳಿಗೆ ಭೇಟಿ ನೀಡಿದ್ದ ಕಾರಣ ದೇವಾಲಯಕ್ಕೂ ಭೇಟಿ ನೀಡಿದ್ದೇನೆ ಎಂದರು.

ಧಾರವಾಡದ ಗಾಣಿಗಾರ ಸಮಾವೇಶದಲ್ಲಿ ಭಾಗಿಯಾಗಲು ಪ್ರಮೋದ್ ಮೋದಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಶನಿದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯರು ಪ್ರಮೋದ್ ಅವರಿಗೆ ಸನ್ಮಾನ ಮಾಡಿ ಸ್ವಾಗತಿಸಿದರು. ಸನ್ಮಾನ ಸ್ವೀಕರಿಸಿ ಅಲ್ಲಿಂದ ಧಾರವಾಡಕ್ಕೆ ತೆರಳಿದರು.

ಗ್ರಹಣದ ಸಂಬಂಧ ದೇವಾಲಯಕ್ಕೆ ವಿಶೇಷ ಪೂಜೆ ಮಾಡಲಾಗಿತ್ತು. ತಮ್ಮ ವಿಶೇಷ ಆಹ್ವಾನದ ಮೇರೆಗೆ ದೇವಾಲಯಕ್ಕೆ ಭೇಟಿ ನೀಡಿದ್ದರು ಅಷ್ಟೇ. ಭೇಟಿ ವೇಳೆ ದೇವಾಲಯದ ವಿಶೇಷತೆಗಳ ಕುರಿತು ಮಾಹಿತಿ ಕೇಳಿ ಪಡೆದರು ಅಂತ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.

Comments

Leave a Reply

Your email address will not be published. Required fields are marked *