ತುಮಕೂರು: ಎಂಜಿನಿಯರ್, ಡಾಕ್ಟರ್ ಆಗಿ ಚೆನ್ನಾಗಿ ಸಂಪಾದನೆ ಮಾಡ್ಬೇಕು. ಲೈಫನ್ನ ಎಂಜಾಯ್ ಮಾಡ್ಬೇಕು. ಮಕ್ಕಳು ಮೊಮ್ಮಕ್ಕಳಿಗೂ ಕೂಡಿಡಬೇಕು ಅಂತಲೇ ಎಲ್ಲರ ಕನಸು ಕಾಣ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಡಾ.ಪ್ರಭಾಕರ್ ರೆಡ್ಡಿ ಅವರು ಮಾತ್ರ ಹಣವನ್ನೆಲ್ಲಾ ಬಡ ವಿದ್ಯಾರ್ಥಿಗಳಿಗೆ ದಾನ ಮಾಡ್ತಿದ್ದಾರೆ.
80 ವರ್ಷದ ಡಾ. ಪ್ರಭಾಕರ್ ರೆಡ್ಡಿಯವರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ವಳ್ಳೂರು ಗ್ರಾಮದಲ್ಲಿ ಜನಿಸಿದ್ದಾರೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ವೈದ್ಯ ವೃತ್ತಿಗಾಗಿ ಲಂಡನ್‍ಗೆ ಹೋಗಿರೋ ಇವರು ಸದ್ಯ ನಿವೃತ್ತಿಯಾಗಿದ್ದಾರೆ.

ಬಾಲ್ಯದಲ್ಲೇ ಹೆತ್ತವರನ್ನ ಕಳೆದುಕೊಂಡು ಕಡುಬಡತನದಲ್ಲಿ ಬೆಳೆದ ಇವರಿಗೆ ಡಾಕ್ಟರ್ ಆಗೋದು ಕನಸು. 1965ರಲ್ಲಿ ಎಂಬಿಬಿಎಸ್ ಪದವಿ ಮುಗಿಸಿದ್ದಾರೆ. ಅಂದಿನ ಕಾಲದಲ್ಲಿ 240 ರೂಪಾಯಿ ಶುಲ್ಕ ಕಟ್ಟಲು ಸಾಧ್ಯವಾಗದೆ ಪರಿತಪಿಸಿದ್ದರು. ಸ್ನೇಹಿತರ ಬಳಿ ಸ್ವಲ್ಪ ಹಣ ಸಿಕ್ಕರೂ ಉಳಿದ ಹಣಕ್ಕಾಗಿ ಸಾರ್ವಜನಿಕವಾಗಿ ಭಿಕ್ಷೆ ಬೇಡಿ, ಎಂಬಿಬಿಎಸ್ ಪಾಸ್ ಮಾಡಿದ್ರು. ಆಮೇಲೆ ಕೆಲ ವರ್ಷ ರಾಜ್ಯದಲ್ಲಿ ಸೇವೆ ಸಲ್ಲಿಸಿ ಹೆಚ್ಚಿನ ವ್ಯಾಸಂಗಕ್ಕಾಗಿ ಲಂಡನ್‍ಗೆ ಹೋಗಿ ಅಲ್ಲಿಯೇ ನೆಲೆಸಿದ್ದರು.

ತಮ್ಮ ಕಷ್ಟದ ದಿನಗಳನ್ನ ನೆನಸಿಕೊಳ್ಳುವ ಪ್ರಭಾಕರ ರೆಡ್ಡಿ ಅವರು, ತಮ್ಮ ಹೆಸರಿನಲ್ಲಿ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ವಿದ್ಯಾರ್ಥಿಗಳ ಸಹಾಯಕ್ಕೆ ನಿಂತಿದ್ದಾರೆ. ವಿದ್ಯಾರ್ಥಿ ವೇತನ, ಶಾಲಾ ಕಾಲೇಜ್‍ಗಳಿಗೆ ಕುಡಿಯುವ ನೀರು, ಬೆಂಚು, ಕ್ರೀಡಾಪಟುಗಳಿಗೆ ಸಮವಸ್ತ್ರವನ್ನ ನೀಡ್ತಿದ್ದಾರೆ. ಪಾವಗಡದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಕಟ್ಟಿ ಅದನ್ನು ಸಮಾಜ ಕಲ್ಯಾಣ ಇಲಾಖೆಗೆ ಅತಿ ಕಡಿಮೆ ಬಾಡಿಗೆಗೆ ನೀಡಿದ್ದಾರೆ.

ಬೆಂಗಳೂರಿನಲ್ಲಿದ್ದ 1.5 ಕೋಟಿ ರೂಪಯಿ ಮನೆ ಹಾಗೂ ಲಂಡನ್ನಿನಲಿದ್ದ ಸುಮಾರು 2 ಕೋಟಿ ರೂಪಾಯಿ ಮನೆಯನ್ನು ಮಾರಿದ್ದು, ಈಗ ಬಾಡಿಗೆ ಮನೆಯಲ್ಲಿದ್ದಾರೆ. ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವಿನ ಜೊತೆಗೆ ಪರಿಸರ ಕಾಳಜಿ, ಸ್ವಚ್ಚತೆ, ಹಾಗೂ ಮಾನವೀಯ ಮೌಲ್ಯಗಳ ಬಗ್ಗೆ ಉಪನ್ಯಾಸ ಸಹ ಮಾಡ್ತಿದ್ದಾರೆ.
https://www.youtube.com/watch?v=GYvWiQGjB94
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Leave a Reply