ನಟಸಾರ್ವಭೌಮ ಚಿತ್ರತಂಡವನ್ನು ವಿಶೇಷವಾಗಿ ಗೌರವಿಸಿದ ಪವರ್ ಸ್ಟಾರ್!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ತಾವು ನಟಿಸುತ್ತಿರುವ ‘ನಟಸಾರ್ವಭೌಮ’ ಚಿತ್ರತಂಡವನ್ನು ತಮ್ಮ ಮನೆಗೆ ಕರೆಸಿ ವಿಶೇಷವಾಗಿ ಗೌರವಿಸಿದ್ದಾರೆ. ಪುನೀತ್ ತನ್ನ ಪತ್ನಿ ಜೊತೆ ಸೇರಿ ಚಿತ್ರತಂಡಕ್ಕೆ ವಿಶೇಷ ಔತಣ ನೀಡಿದ್ದಾರೆ.

ಗುರುವಾರ ಚಿತ್ರದ ನಿರ್ದೇಶಕರ ತಂಡ ಪುನೀತ್ ಅವರ ಮನೆಗೆ ವಿಶೇಷ ಔತಣಕ್ಕೆಂದು ಹೋಗಿದ್ದರು. ನಿರ್ದೇಶಕರಾದ ಪವನ್ ಒಡೆಯರ್, ಕುಮಾರ್ ಹಾಗೂ ಹಾಸ್ಯ ನಟ ಚಿಕ್ಕಣ್ಣ ಅವರು ಒಟ್ಟಿಗೆ ಊಟ ಮಾಡಿದ್ದಾರೆ.

ಪುನೀತ್ ರಾಜ್‍ಕುಮಾರ್ ಅವರ ಮನೆಯಲ್ಲಿ ಊಟ ಮಾಡಿ ಬಳಿಕ ಚಿತ್ರತಂಡದ ಸದಸ್ಯರು ಒಂದು ಫೋಟೋವನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಆ ಫೋಟೋವನ್ನು ನಿರ್ದೇಶಕ ಪವನ್ ಒಡೆಯರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅದಕ್ಕೆ,”ಇಂದು ನಾನು ಪುನೀತ್ ಸರ್ ಮನೆಯಲ್ಲಿ ಊಟ ಮಾಡಿದೆ. ಅಶ್ವಿನಿ ಮೆಡಮ್ ಸಾಂಬರ್, ಪೂರಿ ಡೆಸರ್ಟ್ಸ್ ಹಾಗೂ ಅದ್ಭುತ ಊಟಕ್ಕೆ ಧನ್ಯವಾದಗಳು. ಇಡೀ ನಿರ್ದೇಶಕರ ತಂಡ ಊಟವನ್ನು ಆನಂದಿಸಿದೆ” ಎಂದು ಬರೆದು ಪವನ್ ಒಡೆಯರ್ ಪೋಸ್ಟ್ ಮಾಡಿದ್ದಾರೆ.

ಸದ್ಯ ಪುನೀತ್ ರಾಜ್‍ಕುಮಾರ್ ನಟಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ರಾಕ್‍ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ ಪವನ್ ಒಡೆಯರ್, ಪುನೀತ್ ರಾಜ್‍ಕುಮಾರ್ ಅವರ ‘ರಣವಿಕ್ರಮ’ ಚಿತ್ರವನ್ನು ನಿರ್ದೇಶಿಸಿದ್ದರು.

Comments

Leave a Reply

Your email address will not be published. Required fields are marked *