ವಿದ್ಯುತ್ ಸ್ಪರ್ಶಿಸಿ ಲೈನ್‍ಮನ್ ಸಾವು

ಹಾವೇರಿ: ವಿದ್ಯುತ್ ಸ್ಪರ್ಶಿಸಿದ ಪರಿಣಾಮ ಕರ್ತವ್ಯನಿರತ ಲೈನ್‍ಮನ್ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮಣಕೂರು ಗ್ರಾಮದಲ್ಲಿ ನಡೆದಿದೆ.

ಮೃತ ಲೈನಮನ್ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ತೊಗರಿಕಟ್ಟಿ ಗ್ರಾಮದ ಬಸವರಾಜ ಸೋಮಜ್ಜಿ (22) ಎಂದು ಗುರುತಿಸಲಾಗಿದೆ. ಮಣಕೂರು ಗ್ರಾಮದಲ್ಲಿ ವಿದ್ಯುತ್ ದುರಸ್ತಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಬಸವರಾಜ ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ ಹಲಗೇರಿ ಘಟಕದಲ್ಲಿ ಲೈನ್‍ಮನ್ ಆಗಿ ಕೆಲಸ ಮಾಡುತ್ತಿದ್ದರು. ವಿದ್ಯುತ್ ದುರಸ್ತಿ ಕಾರ್ಯ ನಡೆದಿದ್ದರೂ ವಿದ್ಯುತ್ ಲೈನ್ ಬಂದ್ ಮಾಡದ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ ಎಂದು ಕುಟುಂಬದ ಸದಸ್ಯರು ಮತ್ತು ಅಲ್ಲಿಯ ರೈತರು ಆರೋಪ ಮಾಡುತ್ತಿದ್ದಾರೆ.

ಮೃತನ ಕುಟುಂಬದವರು ಹಿರಿಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಣೇಬೆನ್ನೂರು ತಾಲೂಕು ಸರ್ಕಾರಿ ಆಸ್ಪತ್ರೆ ಶವಾಗಾರದ ಬಳಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ರೈತರು ಪ್ರತಿಭಟನೆ ನಡೆಸಿದ್ದಾರೆ. ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಹಲಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

 

Comments

Leave a Reply

Your email address will not be published. Required fields are marked *