ನಾಲ್ಕು ವರ್ಷಗಳಿಂದ ಪತ್ರಗಳನ್ನೇ ಹಂಚದ ಪೋಸ್ಟ್‌ಮ್ಯಾನ್‌

ಕೊಪ್ಪಳ: ಕಳೆದ ನಾಲ್ಕು ವರ್ಷಗಳಿಂದ ಪತ್ರಗಳನ್ನು ಹಂಚದೆ ಯಲಬುರ್ಗಾ ತಾಲೂಕಿನ ಪೋಸ್ಟ್‌ಮ್ಯಾನ್‌ ನಿರ್ಲಕ್ಷ್ಯ ತೋರಿದ್ದಾನೆ.

ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾಲ್ಕು ವರ್ಷಗಳಿಂದ ಪೋಸ್ಟ್ ಗೆ ಬಂದ ಪತ್ರ, ಎಟಿಎಮ್ ಕಾರ್ಡ್, ಪರೀಕ್ಷಾ ಪ್ರವೇಶ ಪತ್ರ ಸೇರಿದಂತೆ ವಿವಿಧ ಮಹತ್ವದ ದಾಖಲೆಗಳನ್ನು ಹಂಚದೆ ಪೋಸ್ಟ್‌ಮ್ಯಾನ್‌ ಸುರೇಶ್ ತಳವಾರ ನಿರ್ಲಕ್ಷ್ಯ ತೋರಿದ್ದಾನೆ.

ಬ್ಯಾಂಕಿನಿಂದ ಹಾಗೂ ಇತರೆ ಸರ್ಕಾರಿ ಕಚೇರಿಗಳಿಂದ ಬಂದ ಪೋಸ್ಟ್, ಎಟಿಎಂ ಕಾರ್ಡ್ ಹಾಗೂ ಇತರೆ ದಾಖಲೆಗಳು ಬರುತ್ತಿಲ್ಲವೆಂದು ಗ್ರಾಹಕರು ತಲೆಕೆಡಿಸಿಕೊಂಡಿದ್ದಾರೆ. ನಂತರ ಅಂಚೆ ಕಚೇರಿಗೆ ತೆರಳಿ ಪರಿಶೀಲಿಸಿದ್ದಾರೆ. ಆಗ ಎಲ್ಲ ದಾಖಲೆಗಳು ಸಿಕ್ಕಿದ್ದು, ಸುಮಾರು ನಾಲ್ಕು ವರ್ಷಗಳಿಂದ ಹಂಚದೆ ಹಾಗೇ ಇಟ್ಟ ಪತ್ರಗಳೆಲ್ಲವನ್ನೂ ಕಂಡು ಬೆರಗಾಗಿದ್ದಾರೆ.

ಪರಿಶೀಲನೆ ವೇಳೆ ಸುಮಾರು 1 ಸಾವಿರಕ್ಕೂ ಅಧಿಕ ಪತ್ರ, ಎಟಿಎಮ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳು ಲಭ್ಯವಾಗಿವೆ. ನಿರ್ಲಕ್ಷ್ಯ ತೋರಿದ ಸುರೇಶ್ ತಳವಾರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2016 ರಿಂದ ಇಲ್ಲಿಯವರೆಗೆ ಪೋಸ್ಟಿಗೆ ಬಂದ ಎಲ್ಲ ಪತ್ರಗಳನ್ನು ಸುರೇಶ್ ವಿತರಣೆ ಮಾಡದೆ ಹಾಗೇ ಇಟ್ಟುಕೊಂಡಿದ್ದ.

Comments

Leave a Reply

Your email address will not be published. Required fields are marked *