ಹಗರಣ, ಅಕ್ರಮದ ಹೆಸರಲ್ಲಿ ಜನಪ್ರಿಯ ಕಾರ್ಯಕ್ರಮ ಸ್ಥಗಿತಗೊಳಿಸುವ ಹುನ್ನಾರ – ದಿನೇಶ್ ಗುಂಡೂರಾವ್

– ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ

ಬೆಂಗಳೂರು: ಹಗರಣ, ಅಕ್ರಮದ ಹೆಸರಿನಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಬಿಜೆಪಿ ಹುನ್ನಾರ ನಡೆಸಿದೆ. ದ್ವೇಷದ ರಾಜಕಾರಣ ಮಾಡುವುದಿಲ್ಲ ಎನ್ನುತ್ತಾರೆ. ಇದೀಗ ಅದನ್ನೇ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಇಂದಿರಾ ಕ್ಯಾಂಟೀನ್‍ನಲ್ಲಿ ನಡೆದ ಅಕ್ರಮವನ್ನು ತನಿಖೆಗೆ ವಹಿಸಿದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಕೆಟ್ಟ ವಿಚಾರಗಳನ್ನು ಇಟ್ಟುಕೊಂಡು ಈ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತವಾಗಿವೆ. ಇಂದಿರಾ ಕ್ಯಾಂಟೀನ್‍ನಲ್ಲಿ ಇಂದಿರಾ ಹೆಸರುವ ಇರುವ ಕಾರಣಕ್ಕಾಗಿ ಬಿಜೆಪಿಯವರಿಗೆ ಅದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸುವ ಸಂಚು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಡಿಕೆಶಿಗೆ ಟಾಂಗ್
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಎಐಸಿಸಿ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಪತ್ರಿಕೆಗಳಲ್ಲಿ ಬಂದ ತಕ್ಷಣ ಎಲ್ಲವೂ ನಿಜ ಎನ್ನಲು ಸಾಧ್ಯವಿಲ್ಲ. ಪತ್ರಿಕೆಗಳಲ್ಲಿ ಪ್ರಚಾರ ತೆಗೆದುಕೊಂಡು ಕೆಪಿಸಿಸಿ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಪ್ರಚಾರದ ಮೂಲಕ ಆ ಸ್ಥಾನಕ್ಕೆ ಬರಲು ಆಗುವುದಿಲ್ಲ. ಕೇವಲ ಒಬ್ಬರಿಂದ ಪಕ್ಷ ಸಂಘಟನೆ ಮಾಡುತ್ತೇವೆ ಎನ್ನುವುದು ಸುಳ್ಳು. ಬಿಜೆಪಿಯಲ್ಲಿರುವ ಗೊಂದಲಗಳನ್ನು ಡೈವರ್ಟ್ ಮಾಡಲು ಉದ್ದೇಶಪೂರ್ವಕವಾಗಿ ಕಾಂಗ್ರೆಸ್‍ನಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿರಬಹುದು ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.

ನಮ್ಮ ನಾಯಕರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕೇವಲ ಒಬ್ಬಿಬ್ಬರು ಹೇಳಿದ ಮಾತ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಕೆಪಿಸಿಸಿ ಪುನರಚನೆ ಮಾಡುತ್ತೇವೆ. ಅಧ್ಯಕ್ಷರ ಬದಲಾವಣೆಯನ್ನು ಎಐಸಿಸಿ ನಾಯಕರು ನೋಡಿಕೊಳ್ಳುತ್ತಾರೆ ಎಂದು ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *