15 ವರ್ಷದ ಹಿಂದಿನ ಬಿಹಾರ ಸ್ಥಿತಿಗೆ ಪಶ್ಚಿಮ ಬಂಗಾಳ ತಲುಪಿದೆ: ಚುನಾವಣಾ ಅಧಿಕಾರಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆಯ ಸದ್ಯದ ಪರಿಸ್ಥಿತಿ ಕಳೆದ 15 ವರ್ಷದ ಹಿಂದಿನ ಬಿಹಾರ ರಾಜ್ಯದ ಸ್ಥಿತಿಗೆ ತಲುಪಿದೆ ಎಂದು ಬಂಗಾಳ ವಿಶೇಷ ಚುನಾವಣಾ ಅಧಿಕಾರಿಯಾಗಿರುವ ಅಜಯ್ ನಾಯಕ್ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಮಲ್ಡಾ ಎಸ್‍ಪಿ ಅರ್ನಬ್ ಘೋಷ್ ಹಾಗೂ 6 ಜನ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬಳಿಕ ಈ ಹೇಳಿಕೆಯನ್ನು ನಾಯಕ್ ಅವರು ನೀಡಿದ್ದಾರೆ. ಅಲ್ಲದೇ ಜನರು ರಾಜ್ಯದ ಪೊಲೀಸ್ ಇಲಾಖೆ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ನಾಯಕ್ ಅವರು 1984ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದು, ಬಿಹಾರ ಮಾಜಿ ಚುನಾವಣಾ ಅಧಿಕಾರಿಯಾಗಿದ್ದಾರೆ. ಸದ್ಯ ವಿಶೇಷ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 23 ರಂದು ನಡೆಯುವ ಮೂರನೇ ಹಂತದ ಮತದಾನಕ್ಕೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದ್ದು, ಶೇ.92 ಬೂತ್ ಗಳಿಗೆ ಕೇಂದ್ರ ರಕ್ಷಣಾ ದಳದ ಯೋಧರು ರಕ್ಷಣೆ ನೀಡಲಿದ್ದಾರೆ ಎಂದು ವಿವರಿಸಿದರು. ಅಲ್ಲದೇ ಎಲ್ಲಾ ಕ್ಷೇತ್ರಗಳಿಗೂ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದರು.

ಇತ್ತ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾದ ಸುಬ್ರತಾ ಬಕ್ಷಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ನಿವೃತ್ತ ಚುನಾವಣಾ ಅಧಿಕಾರಿಯನ್ನ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿ ಜವಾಬ್ದಾರಿ ನೀಡಿರುವ ಬಗ್ಗೆ ಪ್ರಸ್ತಾಪಿಸಿ ಅಚ್ಚರಿ ವ್ಯಕ್ತಪಡಿಸಿದ್ದರು.

Comments

Leave a Reply

Your email address will not be published. Required fields are marked *