ರಾಜಕಾರಣ ಸಾಕು, ಸಾಕಷ್ಟು ನೊಂದಿದ್ದೇನೆ – ಜಿ.ಟಿ ದೇವೇಗೌಡ

ಮೈಸೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರವಷ್ಟೇ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಈ ಬೆನ್ನಲ್ಲೇ ಇಂದು ಮಾಜಿ ಸಚಿವ ಜಿ.ಟಿ ದೇವೇಗೌಡ ಕೂಡ ರಾಜಕಾರಣದಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣ ಸಾಕು, ನಾನು ಸಾಕಷ್ಟು ನೊಂದಿದ್ದೇನೆ. ಇಡೀ ರಾಜ್ಯ, ದೇಶದ ಜನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ನೋಡಿದರು. 50 ವರ್ಷದಿಂದ ರಾಜಕೀಯ ಮಾಡಿದ್ದೇನೆ. ಹಿರಿಯರ ಜೊತೆ ರಾಜಕೀಯ ಮಾಡಿದ್ದೇನೆ. ನನಗೆ ಸಾಕು ಎನಿಸಿದೆ. ಇವತ್ತಿನ ಪರಿಸ್ಥಿತಿಯಲ್ಲಿ ರಾಜಕಾರಣ ಸಾಧ್ಯವಿಲ್ಲ ಎಂದರು.

ನಾನು ಮಂತ್ರಿ ಆಗಿ ಆಯ್ತು. ಸರ್ಕಾರದಲ್ಲಿ ಏನಾಯ್ತು. ನಮ್ಮ ಜಿಲ್ಲೆಯಲ್ಲಿ ಏನು ಆಡಳಿತವಾಯ್ತು, ನನಗೆ ಏನಾಯ್ತು ಅದೆಲ್ಲಾ ಈಗ ಹೇಳುವುದು ಉಚಿತವಲ್ಲ. ನನ್ನ ನೋವು ದೇವರಿಗೆ ಮಾತ್ರ ಗೊತ್ತು. ನಾನು ಪ್ರಾಮಾಣಿಕವಾಗಿ ದೇವೇಗೌಡರು ಕುಮಾರಸ್ವಾಮಿಯನ್ನು ದೇವರು ಅಂದುಕೊಂಡು ಕೆಲಸ ಮಾಡಿದ್ದೇನೆ. ಚುನಾವಣೆ ನನಗೆ ಸಾಕಾಗಿದೆ. ಅದನ್ನು ಕುಮಾರಸ್ವಾಮಿ ದೇವೇಗೌಡರಿಗೂ ಹೇಳಿದ್ದೇನೆ. ಕಾರ್ಯಕರ್ತರು ಯಾವತ್ತೂ ನನಗೆ ತೊಂದರೆ ಕೊಟ್ಟಿಲ್ಲ ಎಂದು ತಿಳಿಸಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ನನಗೆ ಅಭೂತಪೂರ್ವ ಗೆಲುವು ಕೊಟ್ಟಿದ್ದಾರೆ. ಅವರಿಗೂ ಧನ್ಯವಾದ ಅರ್ಪಿಸಲು ಆಗಿಲ್ಲ. ನಾನು ಯಾರ ಹಂಗಿನಲ್ಲೂ ಬದುಕಿಲ್ಲ. ಯಾರೂ ನನಗೆ ರಾಜಕೀಯ ಗುರುಗಳಿಲ್ಲ. ಕುಮಾರಸ್ವಾಮಿ, ದೇವೇಗೌಡ, ಸಿದ್ದರಾಮಯ್ಯ ಯಾರಿಂದಲೂ ಒಂದು ಪೈಸೆ ಸಹಾಯವಾಗಿಲ್ಲ. ಕುಮಾರಪರ್ವ, ಚುನಾವಣೆಗಳಿಗೆ ಜೆಡಿಎಸ್‍ನಿಂದ ಒಂದು ರೂಪಾಯಿ ಹಣ ಪಡೆದಿಲ್ಲ. ನಾನು ಸ್ವಂತ ಹಣದಿಂದ ಎಲ್ಲವನ್ನು ಮಾಡಿದ್ದೇನೆ ಎಂದರು.

ಈ ಹಿಂದೆ ಮುಂದಿನ ಚುನಾವಣೆಯಲ್ಲಿ ಹರೀಶ್ ಗೌಡನೇ ಅಭ್ಯರ್ಥಿ ಅಂದಿದ್ದರು. ಎಂಎಲ್‍ಸಿ ಮಾಡುತ್ತೇವೆ ಅಂದಿದ್ದರು ಯಾವುದು ಆಗಲಿಲ್ಲ. ನನಗೆ ಮೈತ್ರಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಖಾತೆ ಬೇಡ ಎಂದು ಒಂದು ತಿಂಗಳು ದೂರ ಸರಿದಿದ್ದೆ. ನನಗಿಷ್ಟವಾದ ಖಾತೆ ಸಿಗಲಿಲ್ಲ. ಹೇಳುತ್ತಾ ಹೋದರೆ ಸಾಕಷ್ಟಿದೆ ಎಂದು ಜಿಟಿಡಿ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *