ಈದ್ಗಾ ಮೈದಾನದಲ್ಲಿ ಸಿಸಿಟಿವಿ ಅಳವಡಿಕೆ ಕಾಮಗಾರಿ – ಜೆಸಿಬಿಗೆ ಅಡ್ಡನಿಂತು ಸ್ಥಳೀಯರ ಹೈಡ್ರಾಮಾ

ಬೆಂಗಳೂರು: ವಿವಾದಿತ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಇಂದು ಭಾರಿ ಹೈಡ್ರಾಮ ನಡೆಯಿತು. ಕೆಲ ಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿ, ಪೊಲೀಸರು ಹಾಗೂ ಸ್ಥಳೀಯರ ಮಧ್ಯೆ ವಾಗ್ವಾದ ನಡೆಯಿತು.

ಕಳೆದ ಕೆಲ ದಿನಗಳಿಂದ ಆರಂಭವಾಗಿರುವ ಈದ್ಗಾ ಮೈದಾನದ ವಿವಾದ ತಣ್ಣಗಾಗುತ್ತಿದ್ದಂತೆ ಇಂದು ಮತ್ತೆ ಪೊಲೀಸರ ಮತ್ತು ಸ್ಥಳೀಯರ ನಡುವೆ ಕಿರಿಕ್ ನಡೆದಿದೆ. ಮೈದಾನದ ವಿಚಾರವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಬಿಎಂಪಿ ಅನುಮತಿ ಪಡೆದು ಪೊಲೀಸರು ಇಂದು ಸಿಸಿಟಿವಿ ಅಳವಡಿಕೆಗೆ ಮುಂದಾಗಿದ್ರು. ಈ ವೇಳೆ ಸ್ಥಳೀಯರು ಇದಕ್ಕೆ ವಿರೋಧಿಸಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ರು. ಸಿಸಿಟಿವಿ ವಯರ್ ಮುಚ್ಚೋಕೆ ತೋಡಿದ್ದ ಗುಂಡಿಗಳನ್ನು ಮುಚ್ಚದಂತೆ ಪಟ್ಟು ಹಿಡಿದ್ರು. ಇಷ್ಟು ದಿನ ಇಲ್ಲದ ಭದ್ರತೆ ಈಗ್ಯಾಕೆ. ಕೇಬಲ್ ಮುಚ್ಚೋಕೆ ಅವಕಾಶ ಕೊಡಲ್ಲ ಎಂದು ಸ್ಥಳೀಯರು ಜೆಸಿಬಿಗೆ ಅಡ್ಡಬಂದು ಹೈಡ್ರಾಮಾವೇ ನಡೆಯಿತು. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ವಿಹೆಚ್‌ಪಿ ತೀವ್ರ ಖಂಡನೆ

ಮೈದಾನದ ಸುತ್ತಮುತ್ತ 12ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಕೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇದಕ್ಕಾಗಿ ಮೈದಾನದ ಸುತ್ತ ಗುಂಡಿ ತೋಡಲಾಗಿತ್ತು. ಇದು ಸೂಕ್ಷ್ಮವಾದ ಪ್ರದೇಶ. ಇಲ್ಲಿನ ಜನರ ಅಭಿಪ್ರಾಯ ಪಡೆದು ಕಾಮಗಾರಿ ಮಾಡಬೇಕು. ಅವ್ರ ಮನಸ್ಸಿಗೆ ಬಂದಂತೆ ಮಾಡಿದ್ರೆ ಹೇಗೆ? ಕೋರ್ಟ್ ಆರ್ಡರ್ ಇದೆ. ಹಿಂದೂಗಳನ್ನೆಲ್ಲ ಕರೆಸಬೇಕಿತ್ತು. ಮೈದಾನದಲ್ಲಿ ನಾವು ಕಾರ್ಯಕ್ರಮಗಳನ್ನು ಮಾಡಿದ್ರೆ ಬಿಡಲ್ಲ. ಮುಸ್ಲಿಂ ಸಮುದಾಯದವರಿಗೆ ಮಾತ್ರ ಅವಕಾಶ ಕೊಡ್ತಾರೆ. ಸಾರ್ವಜನಿಕರಿಗೆ ಸೇರಿರುವ ಜಾಗವಿದು ಎಂದು ಸ್ಥಳೀಯ ಹಿಂದೂ ಸಂಘಟನಾ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಮತ್ತೆ ಕೋವಿಡ್ ಕಾಟ ಕೊಡಲಿದೆ, ಕೊರೊನಾ ಹೋಗುವಾಗ ಹೆಚ್ಚು ತೊಂದರೆ ಕೊಡುತ್ತೆ: ಕೋಡಿ ಶ್ರೀ ಭವಿಷ್ಯ

ಈ ವೇಳೆ ಸ್ಥಳಕ್ಕೆ ಬಂದ ಸ್ಥಳೀಯ ಎಇಇಯನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ನಂತರ ಚಾಮರಾಜಪೇಟೆಯ ಇನ್ಸ್‌ಪೆಕ್ಟರ್‌ ಹಾಗೂ ಎಸಿಪಿ ಸ್ಥಳೀಯರನ್ನು ಮನವೊಲಿಸಿ, ಮೈದಾನದಿಂದ ಚದುರಿಸಿದ್ರು. ಈದ್ಗಾ ಮೈದಾನದ ಭದ್ರತೆಗೆಂದು ಇಂದು 50ಕ್ಕೂ ಹೆಚ್ಚು ಪೊಲೀಸರು ಹಾಗೂ 1 KSRP ತುಕಡಿ, ಮೂರು ಪೊಲೀಸ್ ಜೀಪ್‍ಗಳನ್ನು ನಿಯೋಜನೆಗೊಳಿಸಲಾಗಿತ್ತು. ಮೈದಾನದ ಸುತ್ತಮುತ್ತ ಪೊಲೀಸರ ಕಣ್ಗಾವಲಿದ್ದರೂ, ಸ್ಥಳೀಯರ ಆಕ್ರೋಶ ಕೆಲಕಾಲ ಗೊಂದಲ ಉಂಟುಮಾಡಿತ್ತು. ಈ ವೇಳೆ ತಾಳ್ಮೆಯಿಂದ ಪೊಲೀಸರು, ಅಸಮಾಧಾನಿತ ಸ್ಥಳೀಯರ ಮನವೊಲಿಸಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು.

Comments

Leave a Reply

Your email address will not be published. Required fields are marked *