ಕಳ್ಳರ ಹಾವಳಿಗೆ ಬೇಸತ್ತು ಕೈಯಲ್ಲಿ ದೊಣ್ಣೆ ಹಿಡಿದ ಕಲಬುರಗಿ ಜನ

ಕಲಬುರಗಿ: ನಗರದಲ್ಲಿ ಪೊಲೀಸ್ ಆಯುಕ್ತಾಲಯ ನಿರ್ಮಾಣವಾದರೆ ಕಳ್ಳರು ಮತ್ತು ಪುಂಡರ ಹಾವಳಿ ಕಡಿಮೆಯಾಗುತ್ತೆ ಎಂದು ಕಲಬುರಗಿ ಜನ ಅಂದುಕೊಂಡಿದ್ದರು. ಆದರೆ ದುರಂತ ಎಂದರೆ ಪೊಲೀಸ್ ಆಯುಕ್ತಾಲಯ ಜಾರಿಯಾದ ದಿನದಿಂದ ಕಳ್ಳರ ಹಾವಳಿ ಜಾಸ್ತಿಯಾಗಿದೆ. ಹೀಗಾಗಿ ಬಡಾವಣೆಯ ಜನ ಇದೀಗ ತಮ್ಮ ರಕ್ಷಣೆಗೆ ತಾವೇ ದೊಣ್ಣೆಗಳನ್ನು ಹಿಡಿದು ರಸ್ತೆಗಿಳಿದಿದ್ದಾರೆ.

ಕಳೆದ ನಾಲ್ಕು ತಿಂಗಳಿನಿಂದ ನಗರದಲ್ಲಿ ಸರಣಿ ಕಳ್ಳತನಗಳು ನಡೆಯುತ್ತಿವೆ. ಆದ್ರೆ ಇಲ್ಲಿಯವರೆಗೂ ಒಬ್ಬ ಕಳ್ಳನನ್ನು ಕೂಡ ಪೊಲೀಸರು ಹಿಡಿದಿಲ್ಲ. ಇದರಿಂದ ಬೇಸತ್ತ ಜನ ಅವರ ಆಸ್ತಿಯ ರಕ್ಷಣೆಗೆ ಅವರೇ ಮುಂದಾಗಿದ್ದಾರೆ.

ಈ ಹಿಂದೆ ರಾತ್ರಿ ಸಮಯದಲ್ಲಿ ಜನರು ಮಲಗಿರುವಾಗ ಮಾತ್ರ ಖದೀಮರು ಕಳ್ಳತನ ಮಾಡುತ್ತಿದ್ದರು. ಆದರೆ ಕಲಬುರಗಿ ನಗರದಲ್ಲಿ ಇತ್ತೀಚೆಗೆ ಹಗಲಿನಲ್ಲಿಯೇ ಮನೆಗೆ ಕಳ್ಳರು ಕನ್ನ ಹಾಕುತ್ತಿದ್ದಾರೆ. ಕೆಲ ದುಷ್ಕರ್ಮಿಗಳಂತೂ ಹಣ ನೀಡಿ ಇಲ್ಲ ನಿಮ್ಮನ್ನು ಬಿಡಲ್ಲ ಎಂದು ಮನೆಗಳಿಗೆ ಕಲ್ಲು-ಇಟ್ಟಿಗೆ ಹೊಡೆದು ಹಣ ವಸೂಲಿ ಮಾಡುತ್ತಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ಕೊಟ್ಟರೂ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಇದರಿಂದಾಗಿ ಇಲ್ಲಿನ ಜನರಿಗೆ ಬೆಳಗ್ಗೆ ಕಚೇರಿ, ವ್ಯಾಪಾರ ಅಂತ ಕರ್ತವ್ಯ ಮುಗಿಸಿಕೊಂಡು ಬಂದು ರಾತ್ರಿ ಮನೆ ಕಾಯುವುದೇ ತಲೆನೋವಿನ ಕೆಲಸವಾಗಿಬಿಟ್ಟಿದೆ. ಹೀಗಾಗಿ ಇನ್ನಾದರೂ ಪೊಲೀಸರು ಎಚ್ಚೆತ್ತುಕೊಂಡು ಈ ಕಳ್ಳರ ಹಾವಳಿಗೇ ಬ್ರೆಕ್ ಹಾಕಬೇಕಾಗಿದೆ.

Comments

Leave a Reply

Your email address will not be published. Required fields are marked *