5.64 ಲಕ್ಷ ಮೌಲ್ಯದ 18 ಬೈಕ್‍ಗಳ ವಶ

ದಾವಣಗೆರೆ: ವಿವಿಧ ಪ್ರಕರಣಗಳಲ್ಲಿ ಸುಮಾರು 5.64 ಲಕ್ಷ ಮೌಲ್ಯ ಬೆಲೆ ಬಾಳುವ 18 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ಬಡಾವಣೆ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಬಂಧಿಸಲಾಗಿದೆ. ವಿನಾಯಕ ಟಿ.ಬಿ ಹಾಗೂ ಸತೀಶ್ ಎ.ಬಂಧಿತ ಆರೋಪಿಗಳು. ಜನವರಿ 3 ರಂದು ಆರೋಪಿಗಳು ರಾಂ ಅಂಡ್ ಕೋ ವೃತ್ತದ ಬಳಿ ಕಳ್ಳತನ ಮಾಡಿದ್ದ ಬೈಕ್‍ನಲ್ಲಿ ಸಿಕ್ಕಿಬಿದ್ದಿದ್ದರು. ಅವರನ್ನು ವಿಚಾರಣೆಗೊಳಪಡಿಸಿದಾಗ ಕೆಲವು ತಿಂಗಳುಗಳಿಂದ ನಗರದ ಪಿಜೆ, ನಿಜಲಿಂಗಪ್ಪ ಬಡಾವಣೆ, ಎಂಸಿಸಿ ಬಿ ಬ್ಲಾಕ್, ಕುವೆಂಪು ನಗರ, ಕಾಯಿಪೇಟೆ, ಸಿದ್ದವೀರಪ್ಪ ಬಡಾವಣೆ, ಆಂಜನೇಯ, ರಂಗನಾಥ ಬಡಾವಣೆ ಮತ್ತು ಜಯನಗರ ಬಡಾವಣೆಗಳಲ್ಲಿ ಒಟ್ಟು 18 ಬೈಕ್‍ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಬಂಧಿತರಿಂದ ಎಲ್ಲಾ ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎಎಸ್‍ಪಿ ಎಂ.ರಾಜೀವ್, ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ನಾಗೇಶ್ ಐತಾಳ್, ವೃತ್ತ ನಿರೀಕ್ಷಕ ತಿಮ್ಮಣ್ಣ ಮಾರ್ಗದರ್ಶನದಲ್ಲಿ ಬಡಾವಣೆ ಪಿಎಸ್‍ಐ ಚಿದಾನಂದಪ್ಪ, ಮಹಮದ್ ಜಕ್ರಿಯಾ, ಸಿಬ್ಬಂದಿಗಳಾದ ಸಿದ್ದೇಶ್, ಹರೀಶ್, ಸೈಯದ್ ಅಲಿ, ಪುರುಷೋತ್ತಮ್, ಅರುಣ್ ಕುಮಾರ್, ವಿಶಾಲಾಕ್ಷಿ, ಕುಬೇಂದ್ರಪ್ಪ ಅವರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

Comments

Leave a Reply

Your email address will not be published. Required fields are marked *