10 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಕುಟುಂಬವನ್ನ ರಕ್ಷಣೆ ಮಾಡಿದ ಪೊಲೀಸರು

ಬೆಂಗಳೂರು: ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದಲ್ಲಿ ಇನ್ನೂ ಜೀತಪದ್ಧತಿ ಅಂತ್ಯವಾಗಿಲ್ಲ ಎಂಬುದಕ್ಕೆ ಬೆಂಗಳೂರು ಹೊರವಲಯ ಅನೇಕಲ್ ಮಾತಲಿಂಗಾಪುರ ಸಮೀಪದ ಕಲ್ಲು ಕ್ವಾರಿಯಲ್ಲಿ ಜೀವಂತ ಸಾಕ್ಷಿ ಲಭಿಸಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುಗ್ರಾಮದಿಂದ ಬಂದ ರಾಜಪ್ಪ ಮತ್ತು ಮುನಿಲಕ್ಷ್ಮಮ್ಮ ಕುಟುಂಬ ಕಳೆದ 10 ವರ್ಷಗಳಿಂದ ಕಲ್ಲಿನ ಕ್ವಾರಿಯಲ್ಲಿ ಜೀತದಾಳುಗಳಾಗಿ ದುಡಿಮೆ ಮಾಡಿದ್ದಾರೆ.

 

ಬೆಂಗಳೂರು ಹೊರವಲಯದಲ್ಲಿರುವ ಕಲ್ಲಿನ ಕ್ವಾರಿ ದಿಲೀಪ್ ಎಂಬವರಿಗೆ ಸೇರಿದ್ದು, ಹತ್ತು ವರ್ಷಗಳ ಹಿಂದೆ ರಾಜಪ್ಪ ಅವರ ಕುಟುಂಬ ಕಲ್ಲು ಕ್ವಾರಿಯಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ ಕ್ವಾರಿಯ ಮಾಲೀಕ ದಿಲೀಪ್ ದುಡಿಯಲು ಬಂದ ಇವರನ್ನು ಅಕ್ರಮವಾಗಿ ಬಂಧನದಲ್ಲಿರಿಸಿ ಜೀತಕ್ಕೆ ಇಟ್ಟುಕೊಂಡಿದ್ದಾರೆ. ಅಂದಿನಿಂದ ಇಂದಿನವರೆಗೂ ಇವರಿಗೆ ಒಂದು ರೂಪಾಯಿ ಸಂಬಳ, ರಜೆ ನೀಡದೆ ಹೊರಗಡೆಯೂ ಬಿಡದೆ ಬೆಳಗ್ಗಿನಿಂದ ಸಂಜೆವರೆಗೂ ದುಡಿಸಿಕೊಂಡಿದ್ದಾರೆ. ಅಲ್ಲದೇ ದುಡಿಮೆಗೆ ತಕ್ಕ ಸಂಬಳವನ್ನು ನೀಡಿಲ್ಲ ಎನ್ನಲಾಗಿದೆ.

ಈ ಕುರಿತು ಮಾಹಿತಿ ಪಡೆದ ನಗರದ ಎನ್.ಜಿ.ಓ ಸಂಸ್ಥೆಯೊಂದರ ನೆರವಿನಿಂದ ಜಿಗಣಿ ಪೊಲೀಸರು ಹಾಗೂ ಅನೇಕಲ್ ತಹಶೀಲ್ದಾರ್ ದಿನೇಶ್ ಕಾರ್ಯಾಚರಣೆ ನಡೆಸಿ ಜೀತ ನಡೆಸುತ್ತಿದ್ದ ರಾಜಪ್ಪ, ಮುನಿಲಕ್ಷ್ಮಮ್ಮ, ಕಿರಣ್, ಚಿನ್ನರಾಜು, ಮಾದೇಶ, ಗುರುಸ್ವಾಮಿ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಘಟನೆ ಕುರಿತು ಆರೋಪಿ ದಿಲೀಪ್ ನನ್ನು ವಶಕ್ಕೆ ಪಡೆದಿರುವ ಜಿಗಣಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಮಿಕರು, ಇಷ್ಟು ದಿನಗಳಿಂದ ದುಡಿದ ಶ್ರಮಕ್ಕೆ ಒಂದು ರೂಪಾಯಿಯನ್ನೂ ಪಡೆದಿಲ್ಲ. ನಮ್ಮನ್ನು ನೋಡಲು ಯಾರಾದರೂ ಹತ್ತಿರದ ಸಂಬಂಧಿಕರು ಬಂದರೆ ಅವರನ್ನು ನೋಡಲು ಬಿಡದೆ ಕುಡಿಹಾಕಲಾಗಿತ್ತು. ಕೇವಲ ವಾರಕ್ಕೆ ಅಂಗಡಿಯೊಂದರಿಂದ ಆಹಾರ ಪದಾರ್ಥಗಳನ್ನು ಮಾತ್ರ ನೀಡಲಾಗುತ್ತಿತ್ತು. ಈ ಕುರಿತು ಪ್ರಶ್ನಿಸಿದರೆ ದಿಲೀಪ್ ತಾಯಿ ಸೇರಿ ಹಿಗ್ಗಾಮುಗ್ಗ ಥಳಿಸುತ್ತಿದ್ದರು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *