ಉಡುಪಿಯಲ್ಲಿ ದಾಖಲೆ ಇಲ್ಲದ ಎರಡು ಚೀಲದಲ್ಲಿದ್ದ 1.65 ಕೋಟಿ ರೂ. ವಶ

ಉಡುಪಿ: ಶಿವಮೊಗ್ಗ ಉಪಚುನಾವಣೆ ಹಿನ್ನೆಲೆಯಲ್ಲಿ ಕೋಟಿ ಕೋಟಿ ಕಾಂಚಾಣ ಹರಿದಾಡುತ್ತಿದೆ ಎಂಬ ಮಾತು ಕೇಳಿ ಬರುತ್ತಿತ್ತು. ಇಂತಹ ಆರೋಪಕ್ಕೆ ಪುಷ್ಟಿ ನೀಡುವಂತೆ ಉಡುಪಿ ರೈಲ್ವೇ ರಕ್ಷಣಾ ದಳ ಪೊಲೀಸರು ದಾಖಲೆ ಇಲ್ಲದ 1.65 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.

1.65 ಕೋಟಿ ರೂ. ಮೊತ್ತ ಶಿವಮೊಗ್ಗ ಉಪ ಚುನಾವಣೆ ಹಂಚಿಕೆಗೆ ಬಂದಿತ್ತಾ ಎಂಬ ಸಂಶಯ ಶುರುವಾಗಿದೆ. ಉಡುಪಿ ರೈಲ್ವೆ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ರಾಜಸ್ಥಾನದ ಇಬ್ಬರು ಹಾಗೂ ಕಣ್ಣೂರಿನ ಮತ್ತೊರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ಹಣ ವಶಕ್ಕೆ ಪಡೆದು, ರೈಲ್ವೇ ಪೊಲೀಸ್ ಠಾಣೆಯಲ್ಲಿ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ವಶದಲ್ಲಿರುವ ಮೂರು ಮಂದಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆರೋಪಿಗಳು ರಾಜಸ್ಥಾನದಿಂದ ಮುಂಬೈ ಮೂಲಕ ಕೇರಳದ ಎರ್ನಾಕುಲಂಗೆ ಟಿಕೆಟ್ ಪಡೆದಿದ್ದರು ಎನ್ನಲಾಗಿದೆ. ನೇತ್ರಾವತಿ ಏಕ್ಸ್ ಪ್ರೆಸ್ ರೈಲಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ಕುಮುಟಾದಲ್ಲಿ ಪೊಲೀಸರಿಗೆ ಅನುಮಾನ ಬಂದಿದೆ. ವಿಚಾರಿಸಿದಾಗ ದುಡ್ಡಿರುವ ಎರಡು ಚೀಲಗಳು ಪತ್ತೆಯಾಗಿದೆ. ರಾಜಸ್ಥಾನದಿಂದ ಬಂದ ಹಣ ಪಡೆಯಲು ಕಣ್ಣೂರಿನ ವ್ಯಕ್ತಿ ಮಂಗಳೂರಿಗೆ ಬಂದಿದ್ದ. ಆತನನ್ನು ಉಡುಪಿಗೆ ಕರೆಸಿ ವಶಕ್ಕೆ ಪಡೆಯಲಾಗಿದೆ. ರೈಲ್ವೇ ಪೊಲೀಸರು ಸಂಶಯ ಬಂದು ಟಿಕೆಟ್ ಕೇಳಿದಾಗ ಅಕ್ರಮ ಹಣಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಡುಪಿ, ಮಂಗಳೂರಿನ ಐಟಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಉಡುಪಿ ರೈಲ್ವೇ ರಕ್ಷಣಾ ದಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಉಪಚುನಾವಣೆ ಹಿನ್ನೆಲೆಯಲ್ಲಿ ತಹಶೀಲ್ದಾರ್ ತೀವ್ರ ವಿಚಾರಣೆ ಮಾಡಿದ್ದಾರೆ.

ಆರೋಪಿಗಳಲ್ಲಿ ಇಬ್ಬರು ಜಮೀನು ಖರೀದಿಗಾಗಿ ಹಣ ತಂದಿರುವ ಮಾಹಿತಿ ನೀಡಿದ್ದಾರೆ. ಕಣ್ಣೂರಿನ ವ್ಯಕ್ತಿ ಮನೆ ಬಳಕೆ ವಸ್ತು ಖರೀದಿಗಾಗಿ ಹಣ ಸಾಗಿಸಲಾಗಿದೆ ಎಂದು ಹೇಳಿದ್ದಾನೆ. ಬೇರೆ ಬೇರೆ ಉತ್ತರ,  ಅಧಿಕಾರಿಗಳು ಹಾಗೂ ಪೊಲೀಸರನ್ನು ಮತ್ತಷ್ಟು ಸಂಶಯಕ್ಕೆ ತಳ್ಳಿದೆ.

ಸಂಶಯಕ್ಕೆ ಎಡೆ: ದಾಖಲೆಯಿಲ್ಲದೆ ಇಷ್ಟು ದೊಡ್ಡ ಮೊತ್ತ ಸಾಗಿಸುವುದು ತಪ್ಪು. ಉಪ ಚುನಾವಣೆ ಹಿನ್ನೆಲೆಯಲ್ಲಿ ತನಿಖೆ ತೀವ್ರವಾಗಿ ನಡೆಯುತ್ತಿದೆ. ವಶದಲ್ಲಿರುವ ಸಂಶಯಾಸ್ಪದ ವ್ಯಕ್ತಿಗಳು ಬೇರೆ ಬೇರೆ ಕಾರಣ ಕೊಡುತ್ತಿರುವುದು ಕೂಡಾ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಮಂಗಳೂರು ಐಟಿ ಅಧಿಕಾರಿಗಳು ಹಣ ವಶಕ್ಕೆ ಪಡೆಯುತ್ತಾರೆ. ಸೂಕ್ತ ದಾಖಲೆ ಕೊಡಲು ಅವಕಾಶ ಕೂಡ ಇದೆ ಎಂದು ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *