ಕೊರೊನಾ ಎಫೆಕ್ಟ್- ಕುದುರೆ ಏರಿದ ಪೊಲೀಸ್

– ಗಮನ ಸೆಳೀತು ಕುದುರೆ ಮೇಲಿದ್ದ ಚಿತ್ರ

ಹೈದರಾಬಾದ್: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಸರ್ಕಾರ ಸೇರಿದಂತೆ ಪೊಲೀಸರು ಕೂಡ ವಿವಿಧ ರೀತಿಯಲ್ಲಿ ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಆಂಧ್ರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರು ಕುದುರೆಯನ್ನೇರಿ ವಿಭಿನ್ನ ರೀತಿಯಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಕರ್ನೂಲ್ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಮಾರುತಿ ಶಂಕರ್ ಕುದುರೆ ಸವಾರಿ ಮಾಡುತ್ತಾ ಕೊರೊನಾ ಬಗ್ಗೆ ವಿಭಿನ್ನವಾಗಿ ಜಾಗೃತಿ ಮೂಡಿಸಿದ್ದಾರೆ. ಕುದುರೆ ಏರಿ ಜಾಗೃತಿ ಮೂಡಿಸುವುದರಲ್ಲಿ ವಿಶೇಷತೆ ಏನು ಇರಲಿಲ್ಲ. ಆದರೆ ಕುದುರೆಯ ಮೇಲೆ ಬರೆದಿದ್ದ ಚಿತ್ರ ಎಲ್ಲರ ಗಮನ ಸೆಳೆದಿತ್ತು.

ಬಿಳಿ ಕುದುರೆಯ ಮೈ-ಮೇಲೆ ಕೆಂಪು ಬಣ್ಣದಿಂದ ವೈರಸ್ ಮಾದರಿಯ ಚಿತ್ರವನ್ನು ಬಿಡಿಸಲಾಗಿತ್ತು. ಈ ಕುದುರೆ ಏರಿದ ಇನ್ಸ್‌ಪೆಕ್ಟರ್ ಮಾರುತಿ ಶಂಕರ್ ಪ್ಯಾಪಿಲಿ ಪಟ್ಟಣಗಳಲ್ಲಿ ಸಂಚರಿಸುತ್ತಾ ಜಾಗೃತಿ ಮೂಡಿಸಿದ್ದಾರೆ.

ಕೊರೊನಾ ಹರಡದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಆಗಾಗ ಕೈ ತೊಳೆಯಿರಿ. ಲಾಕ್‍ಡೌನ್ ಸಂದರ್ಭದಲ್ಲಿ ಯಾರೂ ಕೂಡ ಮನೆಯಿಂದ ಹೊರಗೆ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯ ನೂತನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಚೆನ್ನೈನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಕೊರೊನಾ ಹೆಲ್ಮೆಟ್ ಧರಿಸಿಕೊಂಡು ರಸ್ತೆಯಲ್ಲಿ ಬರುವ ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದರು. ಹೆಲ್ಮೆಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆ ಹೆಲ್ಮೆಟ್ ಅನ್ನು ಕಲಾವಿದ ಗೌತಮ್ ಡಿಸೈನ್ ಮಾಡಿದ್ದರು.

Comments

Leave a Reply

Your email address will not be published. Required fields are marked *