ದರ್ಶನ್‌ ಗ್ಯಾಂಗ್‌ ಅಂದರ್‌ – ಖ್ಯಾತ ಹಾಸ್ಯ ನಟನ ಎದೆಯಲ್ಲಿ ಢವಢವ!

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್‌ (Darshan) ಗ್ಯಾಂಗ್‌ ಬಂಧನವಾದ ಬೆನ್ನಲ್ಲೇ ಸ್ಯಾಂಡಲ್‌ವುಡ್‌ (Sandalwood) ಖ್ಯಾತ ಹಾಸ್ಯನಟನಿಗೂ ಪೊಲೀಸರು ನೋಟಿಸ್‌ ನೀಡುವ ಸಾಧ್ಯತೆಯಿದೆ.

ಹೌದು. ಕೊಲೆ ನಡೆದ ಜೂನ್‌ 8 ಶನಿವಾರದಂದು ದರ್ಶನ್‌ ಮತ್ತು ಗ್ಯಾಂಗ್‌ ಸದಸ್ಯರು ಆರ್‌ಆರ್‌ ನಗರದ ಸ್ಟೋನಿಬ್ರೂಕ್‌ ಪಬ್‌ನಲ್ಲಿ ಮಧ್ಯಾಹ್ನದಿಂದ ಪಾರ್ಟಿ ಮಾಡಿದ್ದರು. ಈ ಪಾರ್ಟಿಯಲ್ಲಿ ಹಾಸ್ಯ ನಟ (Comedy Actor) ಭಾಗಿಯಾಗಿದ್ದ.

 

ಸಂಜೆ ವೇಳೆಗೆ ಸ್ವಲ್ಪ ಕೆಲಸವಿದೆ ಎಂದು ಹೇಳಿ ದರ್ಶನ್ ಹೊರಟಿದ್ದರು. ರೇಣುಕಾಸ್ವಾಮಿ ಕೊಲೆಯಾದ ದಿನವೇ ದರ್ಶನ್‌ ಜೊತೆ ಪಾರ್ಟಿ ಮಾಡಿದ್ದರಿಂದ ಪೊಲೀಸರು ಯಾವುದೇ ಕ್ಷಣದಲ್ಲಿ ನಟನನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ದರ್ಶನ್‌ಗೂ ಆರೋಪಿಗೂ ಸಂಬಂಧವೇ ಇಲ್ಲ – ಸ್ನೇಹಿತನ ಮಾತು ಕೇಳಿ ಶೆಡ್‌ನಲ್ಲಿ ಎಲೆಕ್ಟ್ರಿಕ್‌ ಶಾಕ್‌ ನೀಡಿ ಸಿಕ್ಕಿಬಿದ್ದ

ಈಗ ಆ ಖ್ಯಾತ ಹಾಸ್ಯ ನಟನಿಗೆ ನೋಟಿಸ್ ಕೊಡುವ ಚಿಂತನೆಯಲ್ಲಿ ಪೊಲೀಸರಿದ್ದಾರೆ. ಕೊಲೆ ವಿಚಾರವಾಗಿ ಪಬ್‌ನಲ್ಲಿ ಏನಾದರೂ ಚರ್ಚೆ ನಡೆದಿತ್ತಾ ಎಂಬುದರ ಬಗ್ಗೆ ಮಾಹಿತಿ ಪಡೆಯುವ ಸಾಧ್ಯತೆಯಿದೆ. ಈಗ ನೋಟಿಸ್ ಕೊಟ್ಟು ಕರೆಸಬೇಕೇ? ಬೇಡವೇ ಎಂಬುದರ ಬಗ್ಗೆ ಪೊಲೀಸರು ಹಿರಿಯ ಅಧಿಕಾರಿಗಳ ಸಲಹೆ ಕೇಳಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

 

ಈ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗದ ಕಾರಣ ಹಾಸ್ಯ ನಟನನ್ನು ಬಂಧಿಸುವುದಿಲ್ಲ. ಬದಲಾಗಿ ಸಾಕ್ಷಿಯನ್ನಾಗಿ ಪರಿಗಣಿಸಲಿದ್ದಾರೆ. ಕೊಲೆಯ ಬಗ್ಗೆ ಮಾಹಿತಿ ಇಲ್ಲದೇ ಇದ್ದರೂ ಕೂಡ ಪಾರ್ಟಿಯಲ್ಲಿದ್ದ ಎಂಬ ಕಾರಣಕ್ಕೆ ಸಾಕ್ಷಿಯಾಗಿ ಪರಿಗಣನೆ ಮಾಡಲು ಪೊಲೀಸರು ಮುಂದಾಗಲಿದ್ದಾರೆ. ಹೀಗಾಗಿ ಹಾಸ್ಯ ನಟನಿಗೆ ನೋಟಿಸ್ ನೀಡಿ ಪೊಲೀಸರು ವಿಚಾರಣೆಗೆ ಕರೆಸುವ ಸಾಧ್ಯತೆಯಿದೆ.