ಗ್ರಾಮಸ್ಥರು, ಅಧಿಕಾರಿಗಳ ಕಿತ್ತಾಟಕ್ಕೆ ಕಾರಣವಾಯ್ತು ಡಿಸಿಸಿ ಬ್ಯಾಂಕ್ ಸಭೆ – ಪೊಲೀಸರಿಂದ ಲಾಠಿಚಾರ್ಜ್

ದಾವಣಗೆರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆ ಮುಂದೂಡುವ ವಿಚಾರವಾಗಿ ಗ್ರಾಮಸ್ಥರ ಹಾಗೂ ಅಧಿಕಾರಿಗಳ ನಡುವೆ ನಡೆದ ಗಲಾಟೆಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಆಸಗೋಡು ಗ್ರಾಮದಲ್ಲಿ ನಡೆದಿದೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಆಡಳಿತ ಮಂಡಳಿಯ ಸಭೆ ಆಯೋಜಿಸಲಾಗಿತ್ತು. ಆದರೆ ಗ್ರಾಮದ ಕೆಲ ಮುಖಂಡರ ಗುಂಪು ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆ ಇರುವ ಹಿನ್ನೆಲೆ ಚುನಾವಣೆ ನಡೆಸಬಾರದು. ಸಭೆ ನಡದರೆ ಗಲಾಟೆ ಆಗುತ್ತದೆ ಎಂದು ಸಭೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಡಿಸಿಸಿ ಬ್ಯಾಂಕ್ ಸಹಕಾರ ಅಭಿವೃದ್ಧಿ ಅಧಿಕಾರಿ ಗೋಪಾಲ್ ಸಭೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೂ ಸಹ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಈ ಸನ್ನಿವೇಶದಲ್ಲಿ ಪ್ರಾಣ ಹೋದರೂ ಸಭೆ ನಡೆಸಲು ಬಿಡುವುದಿಲ್ಲವೆಂದು ಗ್ರಾಮಸ್ಥರು ಕೂಗಾಡಿ ಗೊಂದಲ ಸೃಷ್ಟಿಸಿದರು. ಇದನ್ನು ತಡೆಯಲು ಬಂದ ಪೊಲೀಸರ ನಡುವೆಯೂ ಗ್ರಾಮಸ್ಥರ ಮಾತಿನ ಚಕಮಕಿ ನಡೆಯಿತು. ಸನ್ನಿವೇಶವನ್ನು ನಿಯಂತ್ರಿಸಲು ಪ್ರಯತ್ನಿಸಿದ ಪೊಲೀಸರು ಅಂತಿಮವಾಗಿ ಲಾಠಿ ಬೀಸಿದರು. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮದ ಮಹಿಳೆಯರು ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *