ಬೆಂಗಳೂರು: ಜಲಸಂಪನ್ಮೂಲ ಹಾಗೂ ವೈದ್ಯಕೀಯ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಕ್ಕೆ ಬ್ಯಾಟರಾಯನಪುರ ಇನ್ಸ್ಪೆಕ್ಟರ್ ಶಿವಸ್ವಾಮಿಯವರನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 20 ರಂದು ಬ್ಯಾಟರಾಯಪುರ ಮೆಟ್ರೋ ಸ್ಟೇಷನ್ ಬಳಿ ಡಿ.ಕೆ ಶಿವಕುಮಾರ್ ಅವರಿಗೆ ಸೇರಿದ ಕಂಪನಿಯೊಂದು ಅನಧಿಕೃತ ಜಾಹಿರಾತು ಫಲಕ ಅಳವಡಿಸಿತ್ತು. ಈ ಬಗ್ಗೆ ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್ ಎಂಬವರು ಐದು ಬಾರಿ ನೋಟಿಸ್ ನೀಡಿದ್ದರು. ಅತ್ತ ನೋಟಿಸ್‍ಗೂ ಪ್ರತಿಕ್ರಿಯಿಸಿಲ್ಲ. ಇತ್ತ ಜಾಹಿರಾತು ಫಲಕಗಳನ್ನು ತೆಗೆಯಲಿಲ್ಲ. ಹೀಗಾಗಿ ಮುತ್ತು ರಾಜು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಠಾಣೆಯ ಇನ್ಸ್ಪೆಕ್ಟರ್ ಶಿವಸ್ವಾಮಿ ಯಾರ ಒತ್ತಡಕ್ಕೂ ಮಣಿಯದೆ ಸಚಿವರ ವಿರುದ್ಧವೇ ಎಫ್‍ಐಆರ್ ದಾಖಲು ಮಾಡಿಕೊಂಡಿದ್ದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಕಡೆಯವರಿಂದ ಸಮಜಾಯಿಸಿ ಪಡೆದು ಅನಧಿಕೃತ ಜಾಹಿರಾತು ಫಲಕಗಳನ್ನು ತೆರವುಗೊಳಿಸಿದ್ದರು. ಡಿಕೆಶಿ ಬೆಂಬಲಿಗರು ಕೇವಲ ಮೈಸೂರು ರಸ್ತೆಯ ಪಂತರಪಾಳ್ಯದಲ್ಲಿ ಮಾತ್ರ ಅನುಮತಿ ಪಡೆದುಕೊಂಡಿದ್ದರು. ಬ್ಯಾಟರಾಯನಪುರ ಮೆಟ್ರೋ ಸ್ಟೇಷನ್ ಬಳಿ ಹಾಕಿದ್ದ ಅನಧಿಕೃತ ಜಾಹಿರಾತುಗಳನ್ನು ಸದ್ಯ ತೆರವುಗೊಳಿಸಿದ್ದಾರೆ. ಹೀಗಾಗಿ ಡಿಕೆಶಿ ವಿರುದ್ಧ ಕೇಸ್ ಮುಕ್ತಾಯಗೊಂಡಿತ್ತು.
ಅನಧಿಕೃತ ಜಾಹಿರಾತಿನ ವಿರುದ್ಧ ಕೇಸ್ ದಾಖಲಿಸಿ ಡಿಕೆ ಶಿವಕುಮಾರ್ ಕೆಂಗಣ್ಣಿಗೆ ಗುರಿಯಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ ಶಿವಸ್ವಾಮಿ ಬ್ಯಾಟರಾಯನಪುರದಿಂದ ಏಕಾಏಕಿ ಸ್ಥಳ ತೊರಿಸದೇ ವರ್ಗಾವಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply