ಪೊಲೀಸ್ ಧ್ವಜ ದಿನಾಚರಣೆ – ಶ್ರೇಷ್ಠ ರಾಷ್ಟ್ರನಿರ್ಮಾಣದ ಗುರಿ ನಮ್ಮೇಲ್ಲರ ಧ್ಯೇಯ: ಮಹಮ್ಮದ್ ರೋಷನ್

ಹಾವೇರಿ: ನಾವುಗಳೆಲ್ಲರೂ ವಿಭಿನ್ನವಾದ ಪ್ರದೇಶ, ಭಾಷೆ, ಜಾತಿ, ಧರ್ಮದಿಂದ ಬಂದವರಾದರೂ ನಮ್ಮೆಲ್ಲರ ಏಕೈಕ ಧ್ಯೇಯ ಶ್ರೇಷ್ಠ ರಾಷ್ಟ್ರ ನಿರ್ಮಾಣದ ಗುರಿಯಾಗಿದೆ. ಸಂವಿಧಾನಕ್ಕೆ ಬದ್ಧರಾಗಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಕರೆ ನೀಡಿದರು.

ಕೆರೆಮತ್ತಿಹಳ್ಳಿಯ ಹಾವೇರಿ ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಜರುಗಿದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೈವಿಧ್ಯಮಯ ಭಾಷೆ, ಜಾತಿ, ಧರ್ಮ, ಸಂಸ್ಕೃತಿ ಇರುವ ನಮ್ಮ ದೇಶದಲ್ಲಿ ರಾಷ್ಟ್ರೀಯ ಐಕ್ಯತೆ, ಸಾಮರಸ್ಯ ಹಾಗೂ ಸಮಾಜದ ಶಾಂತಿಯ ಬದುಕಿಗೆ ಪೊಲೀಸರ ಸೇವೆ ಅತ್ಯಂತ ಶ್ಲಾಘನೀಯವಾದದ್ದು ಎಂದರು. ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ ಧೋನಿ ಸಿಕ್ಸರ್ ಬಾರಿಸಿದ ಬ್ಯಾಟ್

ಪೊಲೀಸ್ ಇಲಾಖೆಯ ಹುದ್ದೆ ಒಂದು ಸವಾಲಿನ ಕೆಲಸವಾಗಿದೆ. ಪ್ರತಿನಿತ್ಯವೂ ಒತ್ತಡದಿಂದ ಕೆಲಸ ನಿರ್ವಹಿಸಬೇಕಾಗಿದೆ. ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕರ್ತವ್ಯದ ಜೊತೆಗೆ ಕುಟುಂಬಕ್ಕೂ ಸಮಯ ನೀಡಬೇಕು. ವಿವಿಧ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ವೃತ್ತಿಯಿಂದ ನಿವೃತ್ತರಾದ ಮೇಲೆ ಪೂರ್ಣಪ್ರಮಾಣದಲ್ಲಿ ಕುಟುಂಬದೊಂದಿಗೆ ಬೆರೆತು ಕಾಲ ಕಳೆಯಬೇಕು ಎಂದು ಸಲಹೆ ನೀಡಿದರು.

ನನ್ನ ವೃತ್ತಿ ಜೀವನದ ಏಳು ವರ್ಷ ಅವಧಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಅವರ ಕಾರ್ಯ ತತ್ಪರತೆ, ನಿಷ್ಠೆ, ವಿಶ್ರಾಂತಿ ಇಲ್ಲದ ಕೆಲಸ ನನಗೆ ರೋಮಾಂಚನ ಉಂಟುಮಾಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಧ್ವಜ ವಂದನೆ ಸ್ವೀಕರಿಸಿದ ನಿವೃತ್ತ ಪೊಲೀಸ್ ನಿರೀಕ್ಷಕರಾದ ಜಿ.ಎಮ್.ಶಶಿಧರ್ ಅವರು ಮಾತನಾಡಿ, ರಾಜ್ಯ ಸರ್ಕಾರದ ಸೇವೆಗಳಲ್ಲಿ ಪೊಲೀಸ್ ಸೇವೆ ಅತ್ಯಂತ ಮುಖ್ಯವಾದ ಸೇವೆಯಾಗಿದೆ. ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯ ದೊರಕಿಸಿ ಕೊಡುವ ಕಾರ್ಯದಲ್ಲಿ ಪೊಲೀಸ್ ಸೇವೆ ಕಾರ್ಯ ವಿಶಿಷ್ಟವಾದದ್ದು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು, ಪ್ರತಿವರ್ಷ ನವೆಂಬರ್ 2 ರಂದು ಪೊಲೀಸ್ ಕಲ್ಯಾಣ ದಿನವನ್ನಾಗಿ ಆಚರಿಸಲಾಗುತ್ತಿತ್ತು. 1984 ರಿಂದ ಏಪ್ರಿಲ್ 2ರಂದು ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. ಈ ದಿನ ಸಾರ್ವಜನಿಕ ಸೇವೆಸಲ್ಲಿಸಿದ ಉತ್ತಮ ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಸೇವೆಯನ್ನು ಸ್ಮರಿಸಿ ಗೌರವಿಸಲಾಗುತ್ತದೆ ಎಂದರು.

ಧ್ವಜ ಮಾರಾಟ ಮತ್ತು ಪೊಲೀಸ್ ಕಲ್ಯಾಣ ನಿಧಿಯಿಂದ ಸಂಗ್ರಹಿಸಲಾದ ಹಣವನ್ನು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವೈದ್ಯಕೀಯ ಉಪಚಾರದ ನೆರವಿಗೆ ಹಾಗೂ ಶವಸಂಸ್ಕಾರದಂತಹ ಕಾರ್ಯಕ್ಕೆ ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸಿನಿಮಾರಂಗ ಬಿಟ್ಟು ಕೃಷಿಯತ್ತ ಮುಖ ಮಾಡಿದ್ರಾ ಸ್ಟಾರ್ ನಟಿ ಸಾಯಿ ಪಲ್ಲವಿ?

ನಿವೃತ್ತರ ಕಲ್ಯಾಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾಂಟಿನ್ ಸೌಕರ್ಯ, ಗುರುತಿನ ಪತ್ರ ನೀಡಿಕೆ, ನಿವೃತ್ತ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ವಾಸ್ತವ್ಯ ಬಯಸಿದರೆ ಜಿಲ್ಲಾ ಪೊಲೀಸ್ ವಸತಿಗೃಹಗಳಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. 2021 ರ ಏಪ್ರಿಲ್‍ನಿಂದ ಈವರೆಗೆ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕುಟುಂಬದವರ ವೈಯಕ್ತಿಕ ಧನಸಹಾಯಕ್ಕಾಗಿ ರೂ.3,64 ಲಕ್ಷ ಹಾಗೂ ಶವಸಂಸ್ಕಾರಕ್ಕಾಗಿ 90 ಸಾವಿರ ಸೇರಿದಂತೆ 4.54 ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.

Comments

Leave a Reply

Your email address will not be published. Required fields are marked *