ಮೃತಪಟ್ಟ ಭಿಕ್ಷುಕನ ಬ್ಯಾಗಲ್ಲಿ ಸಿಕ್ತು 3 ಲಕ್ಷ ರೂ.

ಹೈದರಾಬಾದ್: ಆಂಧ್ರಪ್ರದೇಶದ ಗುಂತಕಲ್ ನಗರದಲ್ಲಿ ಮೃತಪಟ್ಟ ಭಿಕ್ಷಕನೊಬ್ಬನ ಬ್ಯಾಗಿನಲ್ಲಿ 3 ಲಕ್ಷ ಹಣ ಸಿಕ್ಕಿರುವ ಅಚ್ಚರಿಯ ಘಟನೆಯೊಂದು ಶುಕ್ರವಾರ ಬೆಳಕಿಗೆ ಬಂದಿದೆ.

ಮೃತ ಭಿಕ್ಷುಕನನ್ನು 70 ವರ್ಷದ ಬಶೀರ್ ಸಾಹೇಬ್ ಎಂದು ಗುರುತಿಸಲಾಗಿದೆ. ಬಶೀರ್ ಚಿತ್ತೂರು ಜಿಲ್ಲೆಯ ಮದನಪಲ್ಲಿ ಮೂಲದವರಾಗಿದ್ದು, ಮಸ್ತಾನ್ ವಾಲಿ ದರ್ಗಾ ಬಳಿ ಅನೇಕ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದರು.

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಶೀರ್, ಕಳೆದ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ದರ್ಗಾ ಬಳಿ ಬಂದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಬಶೀರ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಬಶೀರ್ ಬ್ಯಾಗ್ ಸಿಕ್ಕಿದೆ. ಈ ಬ್ಯಾಗನ್ನು ಪರಿಶೀಲಿಸಿದಾಗ ಅದರೊಳಗಡೆ ಒಂದು ಐಡಿ ಕಾರ್ಡ್ ಸಿಕ್ಕಿದೆ. ಅಲ್ಲದೆ ಸಾಕಷ್ಟು ನಾಣ್ಯ ಹಾಗೂ ನೋಟುಗಳನ್ನು ಕಂಡು ಪೊಲೀಸರು ದಂಗಾಗಿದ್ದಾರೆ.

ಬ್ಯಾಗಿನ ಒಳಗಡೆಯಿದ್ದ ಎಲ್ಲಾ ಹಣವನ್ನು ಎಣಿಕೆ ಮಾಡಿದಾಗ 3,22,670 ಲಕ್ಷ ರೂ. ದೊರೆತಿದೆ. ಇಷ್ಟೊಂದು ಹಣವಿದ್ದರೂ ಬಶೀರ್ ಯಾವುದೇ ಚಿಕಿತ್ಸೆ ಪಡೆದುಕೊಳ್ಳದೇ ಮೃತಪಟ್ಟಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *