ಆರೋಪಿ ಬಂಧನಕ್ಕೆ ಏಮ್ಸ್‌ ಒಳಗಡೆ ವಾಹನ ನುಗ್ಗಿಸಿದ ಪೊಲೀಸರು!

ಡೆಹ್ರಾಡೂನ್‌: ಮಹಿಳಾ ವೈದ್ಯೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನರ್ಸಿಂಗ್ ಅಧಿಕಾರಿಯನ್ನು ಬಂಧಿಸಲು ಪೊಲೀಸ್ (Police) ಅಧಿಕಾರಿಗಳು ಬೊಲೆರೋ ಜೀಪ್‌ ವಾಹನವನ್ನು ಏಮ್ಸ್ (AIIMS) ಆಸ್ಪತ್ರೆಗೆ ನುಗ್ಗಿಸಿದ ಘಟನೆ ಋಷಿಕೇಶದಲ್ಲಿ (Rishikesh) ನಡೆದಿದೆ.

ಸಿನಿಮಾದಂತೆ ಏಮ್ಸ್‌ ತುರ್ತು ಚಿಕಿತ್ಸಾ ವಾರ್ಡ್‌ ಮೂಲಕ ವಾಹನ ಸಂಚರಿಸಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ವಿಡಿಯೋ ವೈರಲ್‌ (Video Viral) ಆಗಿದೆ. ಏಮ್ಸ್‌ನಲ್ಲಿರುವ ನರ್ಸಿಂಗ್ ಅಧಿಕಾರಿ ಸತೀಶ್‌ ಕುಮಾರ್‌ ಮಹಿಳಾ ವೈದ್ಯೆಯೊಬ್ಬರನ್ನು ಶಸ್ತ್ರಚಿಕಿತ್ಸಾ ಕೊಠಡಿಯೊಳಗೆ ಲೈಂಗಿಕವಾಗಿ ನಿಂದಿಸಿದ ಆರೋಪ ಕೇಳಿ ಬಂದಿದೆ.  ಇದನ್ನೂ ಓದಿ: ಅಯೋಧ್ಯೆ ರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಕೊಡುಗೆ

 

 

ಈತನನ್ನು ಸೇವೆಯಿಂದಲೇ ವಜಾಗೊಳಿಸುವಂತೆ ಏಮ್ಸ್‌ನಲ್ಲಿ ಓದುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಮಂಗಳವಾರ ಪ್ರತಿಭಟನೆ ನಡೆಸುತ್ತಿದ್ದರು.

ಆತನನ್ನು ಬಂಧಿಸಿ ಕರೆ ತರುತ್ತಿದ್ದಾಗ ಪ್ರತಿಭಟನಕಾರರು ಪೊಲೀಸ್‌ ವಾಹನವನ್ನು ಸುತ್ತುವರಿದು ಆತನನನ್ನು ಕೂಡಲೇ ಸೇವೆಯಿಂದಲೇ ತೆಗೆದು ಹಾಕುವಂತೆ ಆಗ್ರಹಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

 

ವಾಹನ ನುಗ್ಗಿಸಿದ್ದು ಯಾಕೆ?
ನಾಲ್ಕನೇ ಮಹಡಿಯಲ್ಲಿ ಆರೋಪಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಅರೆಸ್ಟ್‌ ಮಾಡಲು ಆಸ್ಪತ್ರೆಗೆ ಬಂದಿದ್ದರು.  ಆಸ್ಪತ್ರೆಯ ಹೊರಗಡೆ ಭಾರೀ ಸಂಖ್ಯೆಯಲ್ಲಿ ಏಮ್ಸ್‌ ವೈದ್ಯರು, ನರ್ಸ್‌ಗಳು ಪ್ರತಿಭಟನೆ ನಡೆಸುತ್ತಿದ್ದರು. ಬಂಧಿಸಿ ಕರೆ ತರುವಾಗ ಆತನ ಮೇಲೆ ಹಲ್ಲೆ ನಡೆಯುವ ಸಾಧ್ಯತೆ ಇತ್ತು. ಈ ಕಾರಣಕ್ಕೆ ಆಸ್ಪತ್ರೆಯ ಒಳಗಡೆ ವಾಹನ ನುಗ್ಗಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.