ಸಾಲ ಪಡೆದವರ ಮನೆಯ ಮೇಲೆ ಗೋಡೆ ಬರಹ ತಡೆಗಟ್ಟಬೇಕು: ಫೈನಾನ್ಸ್‌ ಹಾವಳಿ ನಿಯಂತ್ರಣಕ್ಕೆ ಗೈಡ್‌ಲೈನ್ಸ್‌

– ಮೈಕ್ರೋ ಫೈನಾನ್ಸ್ ಕಂಪನಿಗೆ ಮೂಗುದಾರ ಹಾಕಲು ಮುಂದಾದ ಪೊಲೀಸರು

ಬೆಂಗಳೂರು: ಮೈಕ್ರೋ ಫೈನಾನ್ಸ್‌ಗಳ (Micro Finance) ವಿರುದ್ಧ ಸಮರ ಸಾರಲು ಪೊಲೀಸರು ಮುಂದಾಗಿದ್ದಾರೆ. ಮೈಕ್ರೋ ಫೈ‌ನಾನ್ಸರ್ಸ್ ಹಾವಳಿಗೆ ಕಡಿವಾಣ ಹಾಕಲು ಪೊಲೀಸರು ಹೊಸ ಗೈಡ್‌ಲೈನ್ ಹೊರಡಿಸಿದ್ದಾರೆ.

ಪೊಲೀಸ್ ಮಹಾನಿರ್ದೇಶಕರು, ಬೆಂಗಳೂರು ಕಮಿಷನರ್ ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕಠಿಣ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸರ್ಸ್‌ ಬಡವರ ರಕ್ತ ಹಿರುತ್ತಿದ್ದು, ಮರ್ಯಾದೆಗೆ ಅಂಜಿ ಹಲವರು ಊರು ಬಿಟ್ಟು ಹೋಗುತ್ತಿದ್ದಾರೆ. ಇನ್ನೂ ಕೆಲವರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ, ಮೈಕ್ರೋ ಫೈನಾನ್ಸ್‌ ವಿರುದ್ಧ ಕ್ರಮಕೈಗೊಳ್ಳಲು ಸಂಬಂಧಪಟ್ಟ ಪೊಲೀಸರಿಗೆ ಹಿರಿಯ ಅಧಿಕಾರಿಗಳಿಂದ ಒಂದಷ್ಟು ಅಂಶಗಳನ್ನು ಒಳಗೊಂಡ ಹೊಸ ಗೈಡ್‌ಲೈನ್ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ

ಮಾರ್ಗಸೂಚಿಯಲ್ಲೇನಿದೆ?
* ಸಾಲ ಪಡೆದವರ ಮನೆಯ ಮೇಲೆ ಗೋಡೆ ಬರಹ ಬರೆಯವುದನ್ನ ತಡೆಗಟ್ಟಬೇಕು
* ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಸಾಲ ಪಡೆದಿರೋ ಬಗ್ಗೆ ಗೋಡೆ ಬರಹ ಬರೆಯುವವರ ವಿರುದ್ಧ ಕ್ರಮ ವಹಿಸಬೇಕು
* ಅಕ್ರಮವಾಗಿ ಮೈಕ್ರೋ ಫೈನಾನ್ಸ್ ವ್ಯವಹಾರ ಮಾಡುತ್ತಿರುವ ಫೈನಾನ್ಸರ್ಸ್‌ ವಿರುದ್ಧ ಕಾನೂನು ಕ್ರಮ ಜರಗಿಸಬೇಕು
* ಫೈನಾನ್ಸರ್ಸ್ ಕಿರುಕುಳದಿಂದ ನೊಂದ ಜನರು ಪೊಲೀಸ್ ಠಾಣೆಗೆ ಬಂದರೆ ಪೊಲೀಸರು ಸ್ಪಂದಿಸಬೇಕು
* ಆರ್‌ಬಿಐ ಮಾರ್ಗಸೂಚಿ ಉಲ್ಲಂಘನೆ ಮಾಡಿ ಸಾಲ ನೀಡಿರುವಂತಹ ಕಂಪನಿಗಳ ಪಟ್ಟಿ ಮಾಡಿ ಅಗತ್ಯ ಕ್ರಮ‌ಕೈಗೊಳ್ಳಬೇಕು
* ಮೈಕ್ರೋ ಫೈನಾನ್ಸ್ ಕಂಪನಿಗಳ ಮುಖ್ಯಸ್ಥರ ಸಭೆ ಕರೆದು ಮಾತನಾಡಲು ಸಂಬಂಧಪಟ್ಟ ಎಸ್ಪಿಗಳಿಗೆ ಸೂಚನೆ

ಹೀಗೆ, ರಾಜ್ಯ ಸರ್ಕಾರದ ಮಟ್ಟದಲ್ಲಿ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರಗಿಸುವ ಸೂಚನೆ ಕೊಡಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.