ಪ್ರತಿಭಟನಾ ಮೆರವಣಿಗೆಯನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಯಶಸ್ವಿ

ಮಂಡ್ಯ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಮಂಡ್ಯದಲ್ಲಿ ಮುಸ್ಲಿಂ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ರೂಪಿಸಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಡೆಯುವಲ್ಲಿ ಮಂಡ್ಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಡ್ಯದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿತ್ತು. ಜಿಲ್ಲಾಡಳಿ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳಿಂದಾಗಿ ಪ್ರತಿಭಟನಾ ಮೆರವಣಿಗೆ ನಡೆಯದೇ ಒಂದೇ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಂಡ್ಯದ ಈದ್ಗಾ ಮೈದಾನಾದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನೆ ನಡೆಸಬೇಕೆಂದು ಮುಸ್ಲಿಂ ಸಂಘಟನೆ ಸೇರಿದಂತೆ ಇತರೆ ಸಂಘಟನೆಗಳು ಯೋಜನೆ ಹಾಕಿಕೊಂಡಿದ್ದವು. ಹೀಗಾಗಿ ಮಂಡ್ಯ ಎಸ್‍ಪಿ ಪರಶುರಾಮ್ ಹಾಗೂ ಎಎಸ್‍ಪಿ ಶೋಭಾರಾಣಿ ನೇತೃತ್ವದಲ್ಲಿ ಈ ಪ್ರತಿಭಟನಾ ಮೆರವಣಿಗೆಯನ್ನು ತಡೆಯುವ ಉದ್ದೇಶದಿಂದ ಈದ್ಗಾ ಮೈದಾನದಲ್ಲಿ ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಲ್ಲದೇ ಈದ್ಗಾ ಮೈದಾನದ ಸುತ್ತ 20 ಸಿಸಿ ಕ್ಯಾಮರಾಗಳನ್ನು ಸಹ ಅಳವಡಿಸಲಾಗಿತ್ತು.

ಮಂಡ್ಯ ನಗರದ ಆಯಾ ಕಟ್ಟಿನ ಸ್ಥಳಗಳಲ್ಲಿ ಹಾಗೂ ಪ್ರಮುಖ ಮಸೀದಿಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ನಂತರ ಸಾವಿರಾರು ಸಂಖ್ಯೆಯಲ್ಲಿ ತೋಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಈದ್ಗಾ ಮೈದಾನಕ್ಕೆ ಬಂದು ಮುಸ್ಲಿಮರು ತ್ರಿವರ್ಣ ಧ್ವಜ ಹಿಡಿದು ಪ್ರಾರ್ಥನೆ ಸಲ್ಲಿಸಲಿದ್ದರು. ಬಳಿಕ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮುಖಂಡ ಹಾಗೂ ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ಮುಸ್ಲಿಮರು ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಮನವಿ ಪತ್ರ ಸಲ್ಲಿಸಿದರು. ನಂತರ ಪೊಲೀಸರು ಮುಂದೆ ನಿಂತುಕೊಂಡು ಈದ್ಗಾ ಮೈದಾನಕ್ಕೆ ಬಂದಿದ್ದ ಮುಸ್ಲಿಂರನ್ನು ಬಿಡಿ ಬಿಡಿ ಆಗಿ ಕಳಿಸಿದ್ದಾರೆ. ಈ ಮೂಲಕ ಇಂದು ಮಂಡ್ಯ ನಗರದಲ್ಲಿ ನಡೆಯಬೇಕಿದ್ದ ಬೃಹತ್ ಪ್ರತಿಭಟನೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಜವಾಬ್ದಾರಿ ನಡೆಯಿಂದ ತಡೆಯಲಾಗಿದೆ.

Comments

Leave a Reply

Your email address will not be published. Required fields are marked *