ಕೋರ್ಟ್‌ಗೆ ಸುಳ್ಳು ಹೇಳಿ ಪರಸ್ತ್ರೀ ಜೊತೆ ಸುತ್ತಾಟ – ರೆಡ್‍ಹ್ಯಾಂಡಾಗಿ ಪತ್ನಿಗೇ ಸಿಕ್ಕಿಬಿದ್ದ ಪೊಲೀಸ್!

ಬೆಂಗಳೂರು: ಪತ್ನಿಗೆ ಜೀನಾವಂಶ ಕೊಡುವಂತೆ ಕೋರ್ಟ್ ಆದೇಶ ನೀಡಿದ್ದರೂ ಸುಳ್ಳು ಹೇಳಿ ಪರಸ್ತ್ರಿಯೊಂದಿಗೆ ಸುತ್ತಾಡುತ್ತಿದ್ದ ಪೊಲೀಸ್ ಪತಿಯನ್ನು ಪತ್ನಿಯೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಕೃಷ್ಣಪ್ಪ ಈತ ವೃತ್ತಿಯಲ್ಲಿ ಪೊಲೀಸ್ ಆಗಿದ್ದನು. ಕೃಷ್ಣಪ್ಪ 12 ವರ್ಷಗಳ ಹಿಂದೆ ವೃತ್ತಿಯಲ್ಲಿ ಟೀಚರ್ ಆಗಿದ್ದ ಕವಿತಾ ಎಂಬವರನ್ನು ಮದುವೆಯಾಗಿದ್ದನು. ಇವರ ದಾಂಪತ್ಯ ಜೀವನಕ್ಕೆ ಸಾಕ್ಷಿ ಎಂಬಂತೆ ಇಬ್ಬರು ಮಕ್ಕಳಿದ್ದರು.

“ನನ್ನ ಪತಿ ಕಳೆದ ಐದಾರು ವರ್ಷಗಳಿಂದ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ನಾನು ಕೋರ್ಟ್ ಮೆಟ್ಟಿಲೇರಿ ಜೀವನಾಂಶಕ್ಕೆ ಮನವಿ ಮಾಡಿದ್ದೆ. ಆಗ ಕೋರ್ಟ್ ನನಗೆ ಜೀವನಾಂಶ ಕೊಡುವಂತೆ ಆದೇಶ ಹೊರಡಿಸಿತ್ತು. ಆದರೂ ಕೃಷ್ಣಪ್ಪ ಸರಿಯಾಗಿ ಜೀವನಾಂಶ ಕೊಡದೇ ನ್ಯಾಯಾಧೀಶರಿಗೆ ಸುಳ್ಳು ಕಥೆ ಹೇಳುತ್ತಿದ್ದನು” ಎಂದು ಕವಿತಾ ಆರೋಪಿಸಿದ್ದಾರೆ.

ಜೀವನಾಂಶದ ವಿಚಾರವಾಗಿ ಸೋಮವಾರ ಕೃಷ್ಣಪ್ಪ ಕೋರ್ಟ್ ಗೆ ಬರಬೇಕಿತ್ತು. ಆದರೆ ಕೋರ್ಟ್ ಗೆ ಸುಳ್ಳು ಹೇಳಿ ಪರಸ್ತ್ರೀಯೊಂದಿಗೆ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದನು. ಆದರೆ ಕೃಷ್ಣಪ್ಪನ ಗ್ರಹಚಾರ ಸರಿ ಇರಲಿಲ್ಲ ಅನ್ನಿಸುತ್ತದೆ. ಚಾಮರಾಜಪೇಟೆ, ಮಾರ್ಕೆಟ್ ರೋಡ್ ಸುತ್ತುವಾಗ ಪತ್ನಿ ಕವಿತಾ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಇತ್ತ ಪತಿ ಬೇರೆ ಹೆಣ್ಣಿನೊಂದಿಗೆ ಇರುವುದನ್ನು ಕಂಡು ಪತ್ನಿ ಕವಿತಾ ಅಟ್ಟಾಡಿಸಿಕೊಂಡು ಹೋಗಿ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಕೃಷ್ಣಪ್ಪ ಹಲ್ಲೆ ಮಾಡಿದ್ದಾನೆ. ಆದರೂ ಕವಿತಾ ಸಾರ್ವಜನಿಕರ ಸಹಾಯದೊಂದಿಗೆ ಕೃಷ್ಣಪ್ಪನನ್ನು ಚಾಮರಾಜಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಸದ್ಯಕ್ಕೆ ಕೃಷ್ಣಪ್ಪನ ವಿರುದ್ಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅಷ್ಟೇ ಅಲ್ಲದೆ ಕೃಷ್ಣಪ್ಪನ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿಯೂ ವರದಕ್ಷಿಣೆ ಕೇಸ್ ದಾಖಲಾಗಿದೆ.

Comments

Leave a Reply

Your email address will not be published. Required fields are marked *