ಮೈಸೂರು: ಪೋಷಕರ ವಿರೋಧದ ನಡುವೆ ಪೊಲೀಸ್ ಪೇದೆಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಪೇದೆಗಳ ರಕ್ಷಣೆಗೆ ಮೈಸೂರಿನ ಒಡನಾಡಿ ಸಂಸ್ಥೆ ನಿಂತಿದೆ.
ಸಿದ್ದರಾಜು ಮತ್ತು ಶ್ವೇತರಾಣಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೇದೆಗಳು. ಪೊಲೀಸ್ ಪೇದೆಗಳ ಸರಳ ಮದುವೆಗೆ ಮೈಸೂರಿನ ಒಡನಾಡಿ ಸೇವಾ ಸಂಸ್ಥೆ ವೇದಿಕೆ ಕಲ್ಪಿಸುವ ಮೂಲಕ ಪ್ರೇಮಿಗಳ ರಕ್ಷಣೆಗೆ ನಿಂತಿದೆ. ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರದ ತಾತನಹಳ್ಳಿ ಗಂಗೇಗೌಡ ಮತ್ತು ಲಕ್ಷ್ಮಮ್ಮ ದಂಪತಿ ಪುತ್ರಿ ಶ್ವೇತಾ ರಾಣಿ, ಮೈಸೂರು ತಾಲೂಕಿನ ಸಿದ್ಧರಾಮನ ಹುಂಡಿ ಮಹದೇವು ಸುಂದ್ರಮ್ಮ ದಂಪತಿ ಪುತ್ರ ಸಿದ್ದರಾಜು ಪರಸ್ಪರ ಪ್ರೀತಿಸುತ್ತಿದ್ದರು.

ಬೆಂಗಳೂರಿನ ವಿವೇಕಾನಂದನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಪೇದೆಗಳಾದ ಸಿದ್ದರಾಜು ಮತ್ತು ಶ್ವೇತರಾಣಿ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಶ್ವೇತಾರಾಣಿ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. ಇವರ ಪ್ರೀತಿಗೆ ಜಾತಿ ಅಡ್ಡಿ ಬಂದ ಹಿನ್ನೆಲೆಯಲ್ಲಿ ಈ ಜೋಡಿ ರಕ್ಷಣೆಗಾಗಿ ಒಡನಾಡಿ ಸಂಸ್ಥೆಯ ಬಳಿಗೆ ಬಂದಿದ್ದರು.
ಇಂದು ಒಡನಾಡಿ ಸಂಸ್ಥೆಯಲ್ಲಿ ಕೊಳ್ಳೇಗಾಲದ ಬೌದ್ಧಿಪೀಠದ ಬಂತೇಜಿ ರತ್ನ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ನಾವಿಬ್ಬರು ಸರಳವಾಗಿ ಇದ್ದೆವು. ಹೀಗಾಗಿ ಇಬ್ಬರು ಪರಸ್ಪರ ಇಷ್ಟಪಟ್ಟಿದ್ದು, ಸರಳವಾಗಿ ಮದುವೆಯಾಗಿದ್ದೇವೆ ಎಂದು ವರ ಸಿದ್ದರಾಜು ಸಂತಸದಿಂದ ಹೇಳಿದ್ದಾರೆ.

ಇದೊಂದು ಮಾನವೀಯ ಮದುವೆಯಾಗಿದೆ. ಮದುವೆಗೆ ಯಾವುದೇ ಜಾತಿ ಮುಖ್ಯವಲ್ಲ, ಬದಲಿಗೆ ಪ್ರೀತಿ ಮುಖ್ಯ. ಆದರೆ ಇನ್ನೂ ಈ ಸಮಾಜದಲ್ಲಿ ಜಾತಿ ವಿಚಾರ ಇರುವುದು ಬೇಸರವಾಗುತ್ತದೆ. ನಾವು ನೂರಾರು ಜೋಡಿಯ ಮದುವೆಯನ್ನು ಮಾಡಿಸಿದ್ದೇವೆ. ನಾವು 21ನೇ ಶತಮಾನದಲ್ಲಿ, ವೈಜ್ಞಾನಿಕವಾದ ಸಮಾಜದಲ್ಲಿ ಇದ್ದೇವೆ. ಇವರ ಮದುವೆ ಮೂಲಕವಾದರೂ ಯುವ ಪೀಳಿಗೆಯಲ್ಲಿ ಪರಿವರ್ತನೆಯಾಗಲಿ ಎಂಬುದು ಆಶಯ ನಮ್ಮದು. ಯಾವುದೇ ಅಡ್ಡಿಯೂ ಬಾರದೆ ಇಬ್ಬರು ಚೆನ್ನಾಗಿರಲಿ ಎಂದು ಒಡನಾಡಿ ಸಂಸ್ಥೆ ಸಂಚಾಲಕ ಸ್ಟ್ಯಾನ್ಲಿ ನವವಧು-ವರನಿಗೆ ಶುಭಾಶಯ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv

Leave a Reply