ಸಂಬಂಧಿ ಪೊಲೀಸ್ ಕಾನ್‍ಸ್ಟೇಬಲ್‍ನಿಂದಲೇ 2 ವರ್ಷ ನಿರಂತರ ಅತ್ಯಾಚಾರ- ನದಿಗೆ ಹಾರಿ ಯುವತಿ ಆತ್ಮಹತ್ಯೆಗೆ ಯತ್ನ

ಲಕ್ನೋ: ಸಂಬಂಧಿ ಪೊಲೀಸ್ ಹೆಡ್ ಕಾನ್‍ಸ್ಟೇಬಲ್ ನಿರಂತರವಾಗಿ 2 ವರ್ಷಗಳ ಕಾಲ ಅತ್ಯಾಚಾರ ಹಾಗೂ ಚಿತ್ರಹಿಂಸೆಯನ್ನು ಸಹಿಸಲಾಗದೆ 25 ವರ್ಷದ ಯುವತಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಹಾಗೂ ಸಾರ್ವಜನಿಕರು ರಕ್ಷಿಸಿದ್ದಾರೆ.

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಘಟನೆ ನಡೆದಿದ್ದು, ಯುವತಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಪೊಲೀಸರು ಹಾಗೂ ಸಾರ್ವಜನಿಕರು ರಕ್ಷಿಸಿದ್ದಾರೆ ಎಂದು ಡಿಸಿಪಿ ಪ್ರಮೋದ್ ಕುಮಾರ್ ತಿಳಿಸಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕೇಸ್ ಸಹ ದಾಖಲಾಗಿದೆ.

ಜನವರಿ 2019ರಲ್ಲಿ ನಡೆದ ಕುಂಭ ಮೇಳಕ್ಕೆ ನಮ್ಮ ಚಿಕ್ಕಪ್ಪ ಅಲಹಬಾದ್‍ಗೆ ಆಹ್ವಾನಿಸಿದ್ದರು. ಈ ವೇಳೆ ಹೋಟೆಲ್‍ಗೆ ಕರೆದೊಯ್ದು ಮತ್ತು ಬರುವ ಔಷಧಿ ಬೆರೆಸಿದ ಕೂಲ್ ಡ್ರಿಂಕ್ಸ್ ನೀಡಿದ್ದರು. ಪ್ರಜ್ಞಾಹೀನಳಾದ ಬಳಿಕ ಅತ್ಯಾಚಾರ ಎಸಗಿ, ವೀಡಿಯೋ ರೆಕಾರ್ಡ್ ಮಾಡಿ, ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಯುವತಿ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ಇದನ್ನೂ ಓದಿ: ಎರಡೂವರೆ ತಿಂಗಳಿಂದ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ- ಆರೋಪಿ ಬಂಧನ

ವೀಡಿಯೋ ಮಾಡಿಕೊಂಡ ಬಳಿಕ ಅವರ ಚಿಕ್ಕಪ್ಪ ಬೆದರಿಸಿ ಅಲಹಬಾದ್ ಹಾಗೂ ಖಾನ್‍ಪುರದಲ್ಲಿ ಕಳೆದ ಎರಡು ವರ್ಷಗಳಿಂದ ಹಲವು ಬಾರಿ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಮಾತ್ರೆ ನೀಡಿ ಮಗುವನ್ನು ತೆಗೆಯಲು ಹೇಳಿದ್ದಾರೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಭಾನುವಾರ ಸಹ ಆರೋಪಿ ಹಾಗೂ ಆತನ ಮಗ ಖಾನ್‍ಪುರದ ಚಕೇರಿ ಪ್ರದೇಶಕ್ಕೆ ಯುವತಿಯನ್ನು ಕರೆದೊಯ್ದು ಮತ್ತೆ ವೀಡಿಯೋ ಚಿತ್ರೀಕರಿಸಿ, ಬ್ಲ್ಯಾಕ್‍ಮೇಲ್ ಮಾಡಿದ್ದಾರೆ. ಅಲ್ಲದೆ ಯುವತಿ ಇದಕ್ಕೆ ವಿರೋಧಿಸಿದ್ದಕ್ಕೆ ಹೊಡೆದು ಚಿತ್ರಹಿಂಸೆ ನೀಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ಇಲ್ಲಿಂದ ತಪ್ಪಿಸಿಕೊಂಡು ಬಂದ ಯುವತಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ, ನದಿಗೆ ಹಾರಿದ್ದಾಳೆ. ಆದರೆ ಪಿಆರ್‍ವಿ ಸಿಬ್ಬಂದಿ ಯುವತಿ ರಕ್ಷಿಸಿದ್ದಾರೆ.

ಟ್ರಾಫಿಕ್ ಪೊಲೀಸ್ ಕಾನ್‍ಸ್ಟೇಬಲ್ ಹಾಗೂ ಮಗನ ವಿರುದ್ಧ ಸಂಬಂಧಿಸಿದ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಇಬ್ಬರನ್ನೂ ಇನ್ನೂ ಬಂಧಿಸಲಾಗಿಲ್ಲ. ಈ ಕುರಿತು ಟ್ರಾಫಿಕ್ ವಿಭಾಗದ ಡಿಸಿಪಿ ಮಾಹಿತಿ ನೀಡಿ, ಮಾಜಿಸ್ಟ್ರೇಟ್ ಎದುರು ಮಹಿಳೆ ಹೇಳಿಕೆ ದಾಖಲಿಸುತ್ತಿದ್ದಂತೆ ಆರೋಪಿ ಕಾನ್‍ಸ್ಟೇಬಲ್‍ನನ್ನು ಸಸ್ಪೆಂಡ್ ಮಾಡಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಸಹ ಒಳಪಡಿಸಲಾಗಿದೆ ಎಂದು ಅವರು ಹೇಳಿದರು.

Comments

Leave a Reply

Your email address will not be published. Required fields are marked *