ಜಿಲ್ಲೆಯ ಎಲ್ಲ ಮಸೀದಿ, ಮದರಸಾಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ- ಪೊಲೀಸರ ಸೂಚನೆ

– ಒಂದು ವಾರ ಗಡುವು ನೀಡಿದ ಪೊಲೀಸರು
– ಮತ್ತೆ ವಿಚಾರಣೆಗೆ ಮೌಲ್ವಿ ಬೆಂಗಳೂರಿಗೆ

ಚಾಮರಾಜನಗರ: ಶಂಕಿತ ಉಗ್ರ ಮೆಹಬೂಬ್ ಪಾಷಾಗೆ ಮೌಲ್ವಿ ಆಶ್ರಯ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಚ್ಚೆತ್ತುಕೊಂಡಿದ್ದು, ಎಲ್ಲ ಮಸೀದಿ ಹಾಗೂ ಮದರಸಾಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚಿಸಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಹೊಸೂರು ಬಡಾವಣೆಯಲ್ಲಿ ಉಗ್ರರಿಗೆ ಆಶ್ರಯ ನೀಡಿದ ಮೌಲ್ವಿ ಸದಾಖತ್ ಉಲ್ಲಾ ಖಾನ್ ಬಂಧನದಿಂದ ಜಿಲ್ಲಾ ಪೋಲಿಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಇದೀಗ ಜಿಲ್ಲೆಯ ಎಲ್ಲ ಮಸೀದಿ, ಮದರಸಾಗಳಲ್ಲಿ ಒಂದು ವಾರದೊಳಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಸೂಚನೆ ನೀಡಿ ನೋಟಿಸ್ ನೀಡಿದೆ.

ಅಲ್ಲದೆ ಮುಂದಿನ ದಿನಗಳಲ್ಲಿ ಅಪರಿಚಿತರು ಕಾಣಿಸಿಕೊಂಡರೆ ಕೂಡಲೇ ಪೋಲಿಸರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಮಸೀದಿ, ಮದರಸಾಗಳ ಹೊಣೆ ಹೊತ್ತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಶಂಕಿತ ಉಗ್ರ ಮೆಹಬೂಬ್ ಪಾಷನಿಗೆ ಆಶ್ರಯ ನೀಡಿದ ಆರೋಪದಡಿ ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣದ ಮೌಲ್ವಿ ಸದಾಖತ್ ಉಲ್ಲಾ ಖಾನ್ ಹಾಗೂ ಆತನ ಸ್ನೇಹಿತ ಅಯೂಬ್ ಖಾನ್‍ನನ್ನ ಪೋಲಿಸರು, ಆಂತರಿಕ ಭದ್ರತಾ ವಿಭಾಗ, ಭಯೋತ್ಪಾದಕ ನಿಗ್ರಹ ಪಡೆ ವಶಕ್ಕೆ ಪಡೆದು ಬೆಂಗಳೂರಿನಲ್ಲಿ ವಿಚಾರಣೆ ನಡೆಸಿದ್ದರು. ನಂತರ ಕರೆದಾಗ ಮತ್ತೆ ಹಾಜರಾಗುವಂತೆ ತಿಳಿಸಿ ಮೌಲ್ವಿ ಹಾಗೂ ಆತನ ಸ್ನೇಹಿತನನ್ನು ಬಿಡುಗಡೆ ಮಾಡಿದ್ದರು.

ಮತ್ತೆ ವಿಚಾರಣೆಗೆ ಮೌಲ್ವಿ
ಉಗ್ರರಿಗೆ ಆಶ್ರಯ ನೀಡಿದ ಆರೋಪದಲ್ಲಿ ಬಂಧಿತನಾಗಿದ್ದ ಮೌಲ್ವಿ ಸದಾಖತ್ ಉಲ್ಲಾ ಖಾನ್ ಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಮೌಲ್ವಿ ಬೆಂಗಳೂರಿಗೆ ತೆರಳುತ್ತಿದ್ದು ಇಂದು ಕೂಡ ವಿಚಾರಣೆಯಲ್ಲಿ ಭಾಗವಹಿಸಿ ಉಗ್ರರ ಬಗ್ಗೆ ಮತ್ತಷ್ಟು ವಿಚಾರ ಬಾಯ್ಬಿಡುವ ಸಾಧ್ಯತೆಯಿದೆ.

ಈಗಾಗ್ಲೇ ಸಿಸಿಬಿ ಅಧಿಕಾರಿಗಳು ಕೂಡ ಎರಡು ದಿನ ವಿಚಾರಣೆ ನಡೆಸಿ ಭಾನುವಾರ ರಾತ್ರಿ ಮೌಲ್ವಿಯನ್ನು ಬಿಡುಗಡೆ ಮಾಡಿದ್ದರು. ಈ ಸಂದರ್ಭದಲ್ಲಿ ಮೊಬೈಲ್ ಸೇರಿದಂತೆ ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಇಂದು ಕೂಡ ತೀವ್ರ ವಿಚಾರಣೆ ನಡೆಸುವ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *