ಪೇದೆಯ ಬೈಕನ್ನೇ ಕದ್ದ ಕಳ್ಳರು

ಚಿಕ್ಕಬಳ್ಳಾಪುರ: ಪೊಲೀಸ್ ಪೇದೆಯ ಬೈಕನ್ನೇ ಕಳ್ಳರು ಕದ್ದಿರುವ ಘಟನೆ ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂದಿಗಿರಿಧಾಮ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಮಧುಸೂದನ್ ಅವರ ಬೈಕ್ ಕಳವು ಮಾಡಲಾಗಿದೆ. ಇವರು ನಂದಿ ಕ್ರಾಸ್ ಸರ್ವೀಸ್ ರಸ್ತೆ ಪಕ್ಕದ ಕೆಂಪಣ್ಣನವರ ಬಿಲ್ಡಿಂಗ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಬಾಡಿಗೆ ಮನೆ ಬಳಿ ನಿಲ್ಲಿಸಲಾಗಿದ್ದ ಬೈಕ್ ನ್ನು ಕಳವು ಮಾಡಲಾಗಿದೆ.

ಮಧುಸೂದನ್ 2019ರ ಜುಲೈ ನಲ್ಲಿ ಖರೀದಿಸಿದ್ದ ಕೆಎ40 ಇಇ-0461 ನೋಂದಣಿ ಸಂಖ್ಯೆಯ 110 ಸಿಸಿಯ ಬಜಾಜ್ ಪ್ಲಾಟಿನಾ ಬೈಕ್ ಕಳ್ಳತನವಾಗಿದೆ. ಕರ್ತವ್ಯ ಮುಗಿಸಿ ರಾತ್ರಿ ಮನೆಗೆ ಬಂದಾಗ ಮನೆಯ ಬಳಿ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಕರ್ತವ್ಯಕ್ಕೆ ಹೋಗಲು ಬಂದು ನೋಡಿದಾಗ ಬೈಕ್ ಇರಲಿಲ್ಲ. ಹೀಗಾಗಿ ಸುತ್ತಲ ಹಳ್ಳಿಗಳಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ.

ಕಳವಾಗಿರುವ ಬೈಕ್ ಪತ್ತೆ ಮಾಡಿಕೊಡುವಂತೆ ಸ್ವತಃ ಪೇದೆ ಮಧುಸೂದನ್ ತಾನು ಕರ್ತವ್ಯ ನಿರ್ವಹಿಸುವ ನಂದಿಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಕಲಂ 379 ಐಪಿಸಿ ಸೆಕ್ಷನ್ ಪ್ರಕಾರ ದೂರು ದಾಖಲಾಗಿದೆ. ಅದೇ ದಿನ ರಾತ್ರಿ ಕೊತ್ತನೂರು ಗ್ರಾಮದಲ್ಲಿ ಕಳ್ಳರು ಬೇರೊಂದು ಬೈಕ್ ಕಳವು ಮಾಡಿದ್ದರು. ಅಲ್ಲದೆ ಚದಲಪುರ ವೃತ್ತದಲ್ಲಿ ಚಿಲ್ಲರೆ ಅಂಗಡಿ ಕಳ್ಳತನಕ್ಕೆ ಯತ್ನಿಸಿದ್ದರು, ಪೊಲೀಸರನ್ನು ಕಂಡು ಬೈಕ್ ಬಿಟ್ಟು ಪರಾರಿಯಾಗಿದ್ದರು.

ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದ ಹಲವಡೆ ಬೈಕ್ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಸಿಬ್ಬಂದಿಯೊಬ್ಬರ ಬೈಕ್ ಕಳುವಾಗಿತ್ತು. ಬೆಳ್ಳಂ ಬೆಳಗ್ಗೆ ಬೈಕ್ ಕಳವು ಪ್ರಕರಣಗಳು ನಡೆಯುತ್ತಿದ್ದು, ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದೆ.

Comments

Leave a Reply

Your email address will not be published. Required fields are marked *