ಪೊಲೀಸ್ ಪೇದೆಯ ಮೇಲೆ ಬಿಜೆಪಿ ಶಾಸಕನಿಂದ ಹಲ್ಲೆ, ಕೊಲೆ ಬೆದರಿಕೆ- ವಿಡಿಯೋ ನೋಡಿ

ಭೋಪಾಲ್: ಬಿಜೆಪಿ ಶಾಸಕರೊಬ್ಬರು ಪೊಲೀಸ್ ಸಿಬ್ಬಂದಿಗೆ ಕಪಾಳಕ್ಕೆ ಬಾರಿಸಿ ಕೊಲೆ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದ ಭೋಪಾಲ್ ದಲ್ಲಿ ನಡೆದಿದೆ.

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಬಿಜೆಪಿ ಶಾಸಕ ಚಂಪಾಲಾಲ್ ದೇವ್ಡಾ ಉದಯನಗರ ಪೊಲೀಸ್ ಠಾಣೆಗೆ ನುಗ್ಗಿ ಕಾನ್ಸ್ ಟೇಬಲ್ ಕಪಾಳಕ್ಕೆ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಪೊಲೀಸರು ಠಾಣೆಗೆ ಕರೆತಂದಿದ್ದರು. ಅವರನ್ನು ಠಾಣಾ ನಿರ್ಬಂಧಿತ ಜಾಗದಲ್ಲಿ ಅವರನ್ನು ಕೂರಿಸಲಾಗಿತ್ತು. ಈ ವೇಳೆ ದೇವ್ಡಾರವರ ಸೋದರ ಅಳಿಯ ಪೊಲೀಸ್ ಠಾಣೆಯ ನಿರ್ಬಂಧಿತ ಸ್ಥಳವನ್ನು ಪ್ರವೇಶಿಸಿದ್ದಾರೆ. ಅಲ್ಲದೇ ಅಲ್ಲಿದ್ದ ವ್ಯಕ್ತಿಯೊಬ್ಬರಿಂದ ನೀರಿನ ಬಾಟಲಿಯನ್ನು ಎಸೆದಿದ್ದಾರೆ.

ಪೇದೆ ಸಂತೋಷ್ ಎಂಬುವರು ಈ ಪ್ರದೇಶವನ್ನು ಪ್ರವೇಶ ಮಾಡಿದ್ದು ಯಾಕೆ ಎಂದು ದೇವ್ಡಾ ಅವರ ಸೋದರ ಅಳಿಯರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ದೇವ್ಡಾರ ಅಳಿಯ ಈ ವಿಷಯವನ್ನು ಸಚಿವರಿಗೆ ತಿಳಿಸಿದ್ದಾರೆ. ವಿಷಯ ತಿಳಿದ ಶಾಸಕ ದೇವ್ಡಾ ಪೊಲೀಸ್ ಠಾಣೆಯ ಒಳಗೆ ಬಂದು ಪೇದೆ ಸಂತೋಷ್ ಅವರ ಕಪಾಳಕ್ಕೆ ಎರಡು ಬಾರಿ ಹೊಡೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ಈ ಎಲ್ಲಾ ಘಟನೆ ಪೊಲೀಸ್ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪೊಲೀಸ್ ಪೇದೆ ಸಂತೋಷ್ ಹೇಳುವಂತೆ ಯಾವುದೋ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ಬಂದು ಅಲ್ಲಿದ್ದ ವ್ಯಕ್ತಿಯೊಬ್ಬರಿಂದ ನೀರಿನ ಬಾಟಲಿಯನ್ನು ಕಿತ್ತುಹಾಕಿದರು. ಅವರು ಹೊರಟು ನಿಂತಾಗ ಸಂತೋಷ್ ಅವರನ್ನು ತಡೆಯಲು ಮುಂದಾದರು. ಆಗ ಶಾಸಕ ದೇವ್ಡಾ ಹಾಗೂ ಅವರ ಮಗ ಪ್ರವೇಶಿಸಿ ಅವರ ಮೇಲೆ ಹಲ್ಲೆಗೆ ಮುಂದಾದರು ಎಂದು ಹೇಳಿದ್ದಾರೆ.

ಈ ಘಟನೆಯನ್ನು ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ ಪಿ ಅನ್ಶುಮನ್ ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಯುತ್ತಿದೆ. ಈ ಘಟನೆಯು ರಾತ್ರಿ 12 ರ ನಂತರ ನಡೆದಿದ್ದು ಭಾರತೀಯ ದಂಡ ಸಂಹಿತೆ 353 ಸೆಕ್ಷನ್ (ಕರ್ತವ್ಯದ ವೇಳೆ ಸರ್ಕಾರಿ ನೌಕರನ ಮೇಲೆ ಹಲ್ಲೆ), ಹಾಗೂ 332(ಕರ್ತವ್ಯ ನಿರ್ವಹಿಸದಂತೆ ಸರ್ಕಾರಿ ನೌಕರನಿಗೆ ಬೆದರಿಸಿ ಗಾಯ ಉಂಟು ಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ದೇವಾಸ್ ಜಿಲ್ಲೆಯ ಬಿಜೆಪಿ ವಕ್ತಾರ ಶಂಭು ಅಗರ್‍ವಾಲ್ ಈ ಘಟನೆ ದೇವ್ಡಾರವರಿಗೆ ಸಂಬಂಧಪಟ್ಟದ್ದಲ್ಲ. ಈ ಕುರಿತಂತೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

Comments

Leave a Reply

Your email address will not be published. Required fields are marked *