ಪಾರಿವಾಳ ಹಿಡಿಯೋ ನೆಪದಲ್ಲಿ ಕಳ್ಳತನ ಎಸಗ್ತಿದ್ದ ಕಳ್ಳರು ಅಂದರ್: ಸಿಕ್ಕಿಬಿದ್ದಿದ್ದು ಹೇಗೆ?

ಬೆಂಗಳೂರು: ಪಾರಿವಾಳ ಹಿಡಿಯುವ ನೆಪದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಅನಿಲ್‍ಕುಮಾರ್ ಜಾನಿ (19), ರಾಹುಲ್ ನಾಯ್ಕ (20) ಹಾಗೂ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ 2 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಬಂಧನದಿಂದಾಗಿ ಐದಕ್ಕೂ ಹೆಚ್ಚು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗೆ ಸಂಚು ರೂಪಿಸುತ್ತಿದ್ದರು?
ಆರೋಪಿಗಳು ಕ್ಯಾಪ್ ಧರಿಸಿ ಬೈಕ್ ನಲ್ಲಿ ಬಂದು ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಮನೆಗಳ್ಳತನಕ್ಕೆ ಪ್ಲಾನ್ ಹಾಕಿಕೊಳ್ಳುತ್ತಿದ್ದರು. ಬೀಗ ಹಾಕಿರುವ ಮನೆಗಳ ಮೇಲೆ ಹಾರಲು ಬಾರದ ಪಾರಿವಾಳ ಬಿಟ್ಟು ಯಾರಿಗೂ ಅನುಮಾನ ಬಾರದಂತೆ ಕಳ್ಳತನ ಮಾಡುತ್ತಿದ್ದರು. ಕಳ್ಳತನದ ವೇಳೆ ಯಾರಾದರೂ ಅನುಮಾನಿಸಿ ಪ್ರಶ್ನಿಸಿದರೆ ಪಾರಿವಾಳ ಟೆರೆಸ್ ಮೇಲೆ ಬಂದಿದೆ ಹಿಡಿದುಕೊಳ್ಳೋಕೆ ಬಂದಿದ್ದೇವೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.

ಸಿಕ್ಕಿಬಿದ್ದಿದ್ದು ಹೇಗೆ?
ಕುಮಾರಸ್ವಾಮಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಸಂಬಂಧ ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ಘಟನಾ ಸ್ಥಳದಲ್ಲಿದ್ದ ಸಿಸಿ ಟಿವಿಯನ್ನು ಪರಿಶೀಲಿಸಿದಾಗ ಓರ್ವ ಬಾಲಕ ಅನುಮಾನಸ್ಪದವಾಗಿ ಪಾರಿವಾಳ ಹಿಡಿದು ಓಡಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಸಿಸಿ ಟಿವಿಯ ಜಾಡನ್ನು ಹಿಡಿದು ಬೆನ್ನತ್ತಿದ್ದಾರೆ. ಈ ವೇಳೆ ಪೊಲೀಸರಿಗೆ ಓರ್ವ ಬಾಲಕ ಸಿಕ್ಕಿದ್ದಾನೆ. ವಿಚಾರಣೆಗೆ ಒಳಪಡಿಸಿದಾಗ ಬಾಲಕ ಕಳ್ಳತನವನ್ನು ಒಪ್ಪಿಕೊಂಡಿದ್ದು, ಕೃತ್ಯದಲ್ಲಿ ಇನ್ನೂ ಇಬ್ಬರು ಭಾಗಿಯಾಗಿರುವುದಾಗಿ ತಿಳಿಸಿದ್ದಾನೆ. ಈ ವೇಳೆ ಆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ.

Comments

Leave a Reply

Your email address will not be published. Required fields are marked *