ಬೆಂಗ್ಳೂರಲ್ಲೊಬ್ಬ ಸೈಕೋಪಾತ್ -ಎಟಿಎಂ ಸೆಕ್ಯೂರಿಟಿ ಗಾರ್ಡ್‌ಗಳೇ ಟಾರ್ಗೆಟ್

-8ನೇ ವಯಸ್ಸಿಗೆ ಅಕ್ಕನನ್ನೇ ಬೆಂಕಿಗೆ ತಳ್ಳಿ ಕೊಲೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಬ್ಬ ಸೈಕೋಪಾತ್ ಇದ್ದು, ಈತ ಎಟಿಎಂ ಸೆಕ್ಯೂರಿಟಿ ಗಾರ್ಡ್ ಗಳನ್ನೇ ಟಾರ್ಗೆಟ್ ಮಾಡಿಕೊಂಡು ಕೊಲೆ ಮಾಡುತ್ತಿದ್ದನು. ಇದೀಗ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜೇಂದ್ರ ಅಲಿಯಾಸ್ ಬೆಂಕಿ ರಾಜೇಂದ್ರ ಬಂಧಿತ ಸೈಕೋಪಾತ್. ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತನ್ನ ಎಂಟನೇ ವಯಸ್ಸಿಗೆ ಸ್ವಂತ ಅಕ್ಕನನ್ನೇ ಬೆಂಕಿಗೆ ತಳ್ಳಿ ಕೊಲೆ ಮಾಡಿದ್ದ ರಾಜೇಂದ್ರ ನಂತರ ಬೆಂಕಿ ರಾಜೇಂದ್ರ ಎಂದು ಫೇಮಸ್ ಆಗಿದ್ದನು. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಸುತ್ತಮುತ್ತಲಿನ ಏರಿಯಾಗಳಲ್ಲಿ ಓಡಾಡುತ್ತಿದ್ದ ರಾಜೇಂದ್ರ ಸೈಕೋ ವ್ಯಕ್ತಿತ್ವ ಹೊಂದಿದ್ದನು.

ತಡರಾತ್ರಿ ಒಂಟಿಯಾಗಿ ಓಡಾಡುತ್ತಿದ್ದ ಈ ರಾಜೇಂದ್ರನಿಗೆ ಎಟಿಎಂ ಸೆಕ್ಯೂರಿಟಿ ಗಾರ್ಡ್‌ಗಳೇ ಟಾರ್ಗೆಟ್. ಅದರಲ್ಲೂ ಸೆಕ್ಯೂರಿಟಿ ಗಾರ್ಡ್ ಎಟಿಎಂ ಒಳಗೆ ನಿದ್ದೆ ಮಾಡುತ್ತಿದ್ದಾನೆ ಎಂದು ಗೊತ್ತಾದರೆ ಕಲ್ಲು ಹುಡುಕಿ ಮಲಗಿರುವ ಸೆಕ್ಯೂರಿಟಿ ಗಾರ್ಡ್ ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿ ಬಿಡುತ್ತಿದ್ದನು.

ಬೆಂಗಳೂರು ಸೌತ್ ಡಿವಿಜನ್‍ನಲ್ಲಿ ಕೆಲ ತಿಂಗಳ ಅಂತರದಲ್ಲಿ ಐದಾರು ಸೆಕ್ಯೂರಿಟಿ ಗಾರ್ಡ್ ಹತ್ಯೆ ಕೇಸ್‍ಗಳು ವರದಿಯಾಗಿದ್ದವು. ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ ಪೊಲೀಸರಿಗೆ ಕೊಲೆಗಾರ ಯಾವುದೇ ಹಣ, ಒಡವೆಗಾಗಿ ಕೊಲೆ ಮಾಡಿಲ್ಲ ಅನ್ನೋದು ತಿಳಿದಿತ್ತು. ಈ ಬಗ್ಗೆ ವಿವಿಧ ತಂಡಗಳಾಗಿ ರಚನೆ ಮಾಡಿ ತನಿಖೆ ಮಾಡುತ್ತಿದ್ದ ವೇಳೆ ಈ ಬೆಂಕಿ ರಾಜೇಂದ್ರ ಒಂದು ದಿನ ಕೈಯಲ್ಲಿ ಕಲ್ಲು ಹಿಡಿದು ರಸ್ತೆಯಲ್ಲಿ ಓಡಾಡುತ್ತಿದ್ದ ಸಿಸಿಟಿವಿ ಪತ್ತೆಯಾಗಿತ್ತು. ವಾರಗಟ್ಟಲೆ ಕಾದು ಬೆಂಕಿ ರಾಜೇಂದ್ರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ಈತನೇ ಎಲ್ಲ ಕೊಲೆಗಗಳ ಸರದಾರ ಅನ್ನೋದು ಪತ್ತೆಯಾಗಿದೆ.

ಸದ್ಯಕ್ಕೆ ಪೊಲೀಸರು ಆರೋಪಿ ಬೆಂಕಿ ರಾಜೇಂದ್ರನನ್ನು ಬಂಧಿಸಿದ್ದಾರೆ. ಈತನ ಮೇಲೆ ಮೂರು ಕೊಲೆ ಪ್ರಕರಣಗಳು ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಸುಳಿವು ಸಿಕ್ಕಿದೆ. ಆ ನಿಟ್ಟಿನಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Comments

Leave a Reply

Your email address will not be published. Required fields are marked *