ಟ್ರೈನಿನಲ್ಲಿ ಪರಾರಿಯಾಗುತ್ತಿದ್ದ ಅಪಹರಣಕಾರರನ್ನು ಫ್ಲೈಟ್ ನಲ್ಲಿ ಹೋಗಿ ಅರೆಸ್ಟ್ ಮಾಡಿದ್ರು ಪೊಲೀಸರು!

ಚಿಕ್ಕಬಳ್ಳಾಪುರ: ಮಾಲೀಕನನ್ನು ಕೊಲೆ ಮಾಡಿ ಅಸ್ಸಾಂಗೆ ತೆರಳುತ್ತಿದ್ದ ತೋಟದ ಭದ್ರತಾ ಸಿಬ್ಬಂದಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನೆಟ್ಟಿ ಬಂಧಿಸಿದ್ದಾರೆ.

ಬೆಂಗಳೂರು ಮೂಲದ ಕರೀಂಖಾನ್(81) ಕೊಲೆ ಮಾಡಿ ಪರಾರಿಯಾಗುತ್ತಿದ್ದ, ಜಾಕೀರ್, ಮುತಾಬುದ್ದೀನ್, ನಸರುವುಲ್ಲಾ ಹುಸೇನ್ ರನ್ನು ಗೌರಿಬಿದನೂರು ಪೊಲೀಸರು ವಿಮಾನದಲ್ಲಿ ಹೋಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏನಿದು ಪ್ರಕರಣ?
ಬೆಂಗಳೂರು ಮೂಲದ ಕರೀಂಖಾನ್(81) ಗೌರಿಬಿದನೂರು ತಾಲೂಕು ಗೊಡ್ಡಾವರಹಳ್ಳಿ ಬಳಿ ಅಡಿಕೆ, ಬಾಳೆ, ತೆಂಗಿನ ತೋಟವನ್ನು ಮಾಡಿ ಫಾರಂ ಹೌಸ್ ಮಾಡಿಕೊಂಡಿದ್ದರು. ತೋಟದ ಮನೆಯ ಕಾವಲಿಗಂತಲೇ ಅಸ್ಸಾಂ ಮೂಲದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನು ನೇಮಕ ಮಾಡಿದ್ದರು.

ಆದರೆ ಮೇ 3ರಂದು ತೋಟಕ್ಕೆ ಬಂದಿದ್ದ ಮಾಲೀಕ ಕರೀಂಖಾನ್ ರನ್ನು ಮೂವರು ಸೆಕ್ಯೂರಿಟಿ ಗಾರ್ಡ್ ಗಳು ಕೈ-ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಾರೆ. ಕರೀಂಖಾನ್ ನನ್ನ ತೋಟದಲ್ಲಿನ ಶೆಡ್ ನಲ್ಲಿ ಮೋಟಾರು ಅಳವಡಿಕೆಗೆ ಇರುವ ಬೃಹದಾದ ಗುಂಡಿಯಲ್ಲಿ ಹಾಕಿ ಕೂಡಿ ಹಾಕಿದ್ದರು. ನಂತರ ಮಗ ಆಯೂಬ್ ಖಾನ್ ಬಳಿ ಅಪರಿಚಿತರಂತೆ ನಿಮ್ಮ ತಂದೆಯನ್ನು ಕಿಡ್ನಾಪ್ ಮಾಡಿದ್ದೇವೆ. 70 ಲಕ್ಷ ರೂ. ನೀಡಿ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಕರೀಂಖಾನ್ ಮಗ ಆಯೂಬ್ ಖಾನ್ ಗೌರಿಬಿದನೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆಗೆ ಮುಂದಾಗಿದ್ದರು. ಆದರೆ ಅಷ್ಟರಲ್ಲೇ ಇತ್ತ ಶೆಡ್‍ನ ಗುಂಡಿಯಲ್ಲಿ ಕೂಡಿ ಹಾಕಿದ್ದ ಕರೀಂಖಾನ್ ಕೂಡ ಗುಂಡಿಯಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಇದರಿಂದ ಪೊಲೀಸರಿಗೆ ವಿಷಯ ಗೊತ್ತಾಗುವಷ್ಟರಲ್ಲಿ ಪರಾರಿಯಾಗಬೇಕು ಎಂದು ತೀರ್ಮಾನಿಸಿದ ಮೂವರು ಸೆಕ್ಯೂರಿಟಿ ಗಾರ್ಡ್ ಗಳು, ರೈಲು ಮೂಲಕ ಅಸ್ಸಾಂಗೆ ಪಯಣ ಬೆಳೆಸಿದ್ದರು.

ಪರಾರಿಯಾದ ವಿಷಯ ತಿಳಿದ ಪೊಲೀಸರು, ಇವರೇ ಅಪಹರಣಕಾರರು ಎಂದು ಅಸ್ಸಾಂ ನತ್ತ ತೆರಳುತ್ತಿದ್ದ ಮೂವರು ಸೆಕ್ಯೂರಿಟಿ ಗಾರ್ಡ್ ಗಳನ್ನ ವಿಮಾನದ ಮೂಲಕ ಕೋಲ್ಕತ್ತಾ ಗೆ ತೆರಳಿ, ಅಲ್ಲಿ ಹೌರಾ ರೈಲ್ವೇ ಜಂಕ್ಷನ್ ನಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಗ ನಡೆದ ಘಟನೆಯನ್ನ ಬಾಯ್ಬಿಟ್ಟಿರೋ ಸೆಕ್ಯೂರಿಟಿ ಗಾರ್ಡ್‍ಗಳು, ಕರೀಂಖಾನ್ ಮೃತಪಟ್ಟಿರುವ ವಿಷಯ ತಿಳಿಸಿದ್ದಾರೆ. ಈ ಸಂಬಂಧ ಸದ್ಯ ಮೂವರನ್ನು ಗೌರಿಬಿದನೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿತ ಸೆಕ್ಯೂರಿಟಿ ಗಾರ್ಡ್ ಗಳಿಂದ ಸ್ಥಳ ಮಹಜರು ಮಾಡಿಸಿದ್ದಾರೆ.

ಮತ್ತೊಂದೆಡೆ ಗುಂಡಿಯಲ್ಲಿದ್ದ ಕರೀಂಖಾನ್ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಗೌರಿಬಿದನೂರು ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

ಇನ್ನೂ ಮೂವರು ಅಸ್ಸಾಂ ಮೂಲದ ಸೆಕ್ಯೂರಿಟಿ ಗಾರ್ಡ್ ಗಳು, ಬಾಂಗ್ಲಾ ದೇಶದಿಂದ ಅಕ್ರಮವಾಗಿ ದೇಶಕ್ಕೆ ನುಸುಳಿದ್ದಾರೆ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದ್ದು, ಆ ದಿಕ್ಕಿನಲ್ಲೂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Comments

Leave a Reply

Your email address will not be published. Required fields are marked *