ಬೆಂಗ್ಳೂರಿಗೆ ಬರುತ್ತಿದೆ ವಿಷಯುಕ್ತ ಆಹಾರ ಪದಾರ್ಥ: ಖಾಸಗಿ ಸಂಸ್ಥೆಯ ವರದಿಯಲ್ಲಿ ಬಯಲು!

ಬೆಂಗಳೂರು: ನಗರಕ್ಕೆ ಪೂರೈಕೆ ಆಗುತ್ತಿರುವ ಆಹಾರ ಪದಾರ್ಥಗಳು ವಿಷಯುಕ್ತವಾಗಿವೆ ಎಂದು ಖಾಸಗಿ ಸಂಸ್ಥೆ ವರದಿ ಬಹಿರಂಗಪಡಿಸಿದೆ.

ಹೌದು. ನಾವು-ನೀವು ತಿನ್ನೋ ಅನ್ನ, ತರಕಾರಿ, ಚಪ್ಪರಿಸಿ ತಿನ್ನೋ ಬೇಬಿಕಾರ್ನ್, ಅಮೃತ ಅಂತಾ ಕುಡಿಯೋ ಹಾಲು ಎಲ್ಲವೂ ವಿಷದಿಂದ ಕೂಡಿದೆ ಎಂದು ಖಾಸಗಿ ಸಂಸ್ಥೆ ವರದಿ ಮಾಡಿದೆ. ನಗರಕ್ಕೆ ಬರುತ್ತಿರುವ ಬೆಳೆಗಳನ್ನು ವಿಷಯುಕ್ತ ನೀರಿನಲ್ಲಿ ಬೆಳೆಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಏಟ್ರೀ ಅನ್ನುವ ನೀರಿನ ಗುಣಮಟ್ಟ ಪರೀಕ್ಷಿಸುವ ಸಂಸ್ಥೆಯೊಂದು ತಿಳಿಸಿದೆ.

ಈ ಸಂಸ್ಥೆ ಆಹಾರ ಪದಾರ್ಥಗಳ ಮೇಲೆ ಅಧ್ಯಯನ ನಡೆಸಿ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಬೆಳ್ಳಂದೂರಿಗಿಂತಲೂ ವಿಷವಾಗಿರುವ ವೃಷಾಭವತಿಯು ಬೈರಮಂಗಲದ ಮೂಲಕ ಹಾದು ಅರ್ಕಾವತಿ ಒಡಲು ಸೇರಿ, ಕಾವೇರಿಯಲ್ಲಿ ಒಂದಾಗುತ್ತಿದೆ. ಈ ನೀರಿನಲ್ಲಿ ಕ್ಯಾನ್ಸರ್ ಕಾರಕ ಸೀಸದ ಅಂಶ, ಜೀವಕ್ಕೆ ಮಾರಕವಾಗಬಲ್ಲ ಮ್ಯಾಗ್ನೇಶಿಯಂ, ಕ್ರೋಮಿಯಂ ಅಂಶ ಇರುವುದನ್ನು ಸಂಸ್ಥೆ ದೃಢಪಡಿಸಿದೆ.

ಈ ವಿಷದ ನೀರಿನಿಂದಲೇ ಬೈರಮಂಗಲ, ಕನಕಪುರ, ರಾಮನಗರ ರೈತರು ಟೊಮ್ಯಾಟೋ, ಕ್ಯಾರೆಟ್ ಇನ್ನಿತರ ತರಕಾರಿ, ಸೊಪ್ಪು, ರಾಗಿ, ಬೇಬಿಕಾರ್ನ್, ಭತ್ತವನ್ನು ಬೆಳೆಸುತ್ತಿದ್ದಾರೆ. ಈ ವಿಷದ ನೀರಿನಲ್ಲಿ ಬೆಳೆದ ಮೇವು ತಿಂದು ಹಸುಗಳ ಹಾಲು ಕೂಡ ವಿಷವಾಗಿ ಮಾರ್ಪಾಡಾಗಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ಈ ಸಂಬಂಧ ಸಂಸ್ಥೆಯು ಸರ್ಕಾರಕ್ಕೆ ವರದಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಲಮಂಡಳಿ ಸಹ ನೀರನ್ನು ಶುದ್ಧೀಕರಣ ಮಾಡುವತ್ತ ಗಮನ ಹರಿಸಿಲ್ಲ. ಬೆಳ್ಳಂದೂರಿಗಿಂತಲೂ ವಿಷವಾಗಿರುವ ವೃಷಾಭವತಿ ಕೆರೆಯ ನಿರ್ಲಕ್ಷ್ಯದ ಬಗ್ಗೆ ಪರಿಸರವಾದಿಗಳು ಎನ್‍ಜಿಟಿ(ನ್ಯಾಷನಲ್ ಗ್ರೀನ್ ಟ್ರೀಬುನಲ್)ಯ ಮೊರೆ ಹೋಗಲೂ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *