140 ಕೋಟಿ ಜನರೇ ನನ್ನ ಕುಟುಂಬ: ಲಾಲೂಗೆ ಮೋದಿ ತಿರುಗೇಟು

ಹೈದರಾಬಾದ್:‌ ದೇಶದ 140 ಕೋಟಿ ಜನರೇ ನನ್ನ ಕುಟುಂಬ ಎಂದು ಹೇಳುವ ಮೂಲಕ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

ತೆಲಂಗಾಣದ ಆದಿಲಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡುತ್ತಾ ಪ್ರಧಾನಿ ಟಾಂಗ್‌ ನೀಡಿದರು. ನನ್ನ ಜೀವನ ತೆರೆದ ಪುಸ್ತಕ, ದೇಶದ 140 ಕೋಟಿ ಜನರು ನನ್ನ ಕುಟುಂಬ. ಇಂದು ದೇಶದ ಕೋಟ್ಯಂತರ ಹೆಣ್ಣುಮಕ್ಕಳು, ತಾಯಂದಿರು ಮತ್ತು ಸಹೋದರಿಯರು ಮೋದಿಯವರ ಕುಟುಂಬ. ದೇಶದ ಪ್ರತಿಯೊಬ್ಬ ಬಡವರೂ ನನ್ನ ಕುಟುಂಬ. ನನಗಾಗಿ ಅವರು, ಅವರಿಗಾಗಿ ನಾನು ಇದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ

ಪಾಟ್ನಾದಲ್ಲಿ ನಡೆದಿದ್ದ ಸಮಾವೇಶದಲ್ಲಿ ಮೋದಿ (Narendra Modi) ಕುಟುಂಬದ ಬಗ್ಗೆ ಮಾತನಾಡಿದ್ದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ (Lalu Prasad Yadav), ನಮ್ಮದು ಕುಟುಂಬ ರಾಜಕಾರಣ ಅಂತ ಮೋದಿ ಹೇಳುತ್ತಾರೆ. ಮೋದಿಗೆ ಸ್ವಂತ ಕುಟುಂಬ ಇಲ್ಲದಿದ್ದರೆ ನಾವೇನು ಮಾಡೋಕೆ ಸಾಧ್ಯ?, ಅವರಿಗೇಕೆ ಮಕ್ಕಳಿಲ್ಲ?. ರಾಮಮಂದಿರದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಅವರು ನಿಜವಾದ ಹಿಂದೂ ಕೂಡ ಅಲ್ಲಾ. ಹಿಂದೂ ಸಂಪ್ರದಾಯದಲ್ಲಿ ತಂದೆ-ತಾಯಿ ಸತ್ತರೆ ತಲೆ ಕೂದಲು ಬೋಳಿಸಬೇಕು. ಆದರೆ ತಾಯಿ ಮೃತಪಟ್ಟಾಗ ಮೋದಿ ಆ ರೀತಿ ಮಾಡಲಿಲ್ಲ ಎಂದು ಹೇಳಿದ್ದರು.

ಲಾಲೂ ಹೇಳಿಕೆಯಿಂದ ಸಿಡಿದೆದ್ದ ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ʼಮೋದಿ ಕಾ ಪರಿವಾರ್ʼ ಎಂಬ ಅಭಿಯಾನವನ್ನು ಆರಂಭಿಸಿದೆ. ಅಮಿತ್‌ ಶಾ, ನಡ್ಡಾ, ಪುಷ್ಕರ್ ಸಿಂಗ್ ಧಾಮಿ, ಮನ್ಸುಕ್ ಮಾಂಡವೀಯ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ತಮ್ಮ ಹೆಸರಿನ ಮುಂದೆ ʼಮೋದಿ ಪರಿವಾರ್ʼ ಎಂದು ಬರೆದುಕೊಂಡಿದ್ದಾರೆ.