49ನೇ ವಸಂತಕ್ಕೆ ಕಾಲಿಟ್ಟ ರಾಹುಲ್ ಗಾಂಧಿ- ಶುಭಕೋರಿದ ಗಣ್ಯರು

– ಮಾಧ್ಯಮದವರಿಗೆ ಸ್ವೀಟ್ ನೀಡಿದ ‘ಕೈ’ ನಾಯಕ

ನವದೆಹಲಿ: 49ನೇ ವಸಂತಕ್ಕೆ ಕಾಲಿಟ್ಟ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ, ಯುಪಿಎ ನಾಯಕಿ, ತಾಯಿ ಸೋನಿಯಾ ಗಾಂಧಿ ಸೇರಿದಂತೆ ಅನೇಕ ಗಣ್ಯರು ಶುಭಕೋರಿದ್ದಾರೆ.

ಜನ್ಮದಿನದ ಸಂಭ್ರಮದಲ್ಲಿರುವ ರಾಹುಲ್ ಗಾಂಧಿ ಅವರು ಮಾಧ್ಯಮದವರಿಗೂ ಸಿಹಿ ವಿತರಣೆ ಮಾಡಿದರು. ಸ್ವತಃ ಕೈಯಲ್ಲಿ ಸ್ವೀಟ್ ಬಾಕ್ಸ್ ಹಿಡಿದು ತಗೆದುಕೊಳ್ಳಿ ಎಂದು ನಗುತ್ತಲೇ ಮಾಧ್ಯಮದವರಿಗೆ ನೀಡಿದರು.

ರಾಹುಲ್ ಗಾಂಧಿ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರು ನಿಮಗೆ ಆರೋಗ್ಯ ಹಾಗೂ ಸುದೀರ್ಘ ಜೀವನ ನೀಡಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಅವರು ಪ್ರತಿಕ್ರಿಯೆ ನೀಡಿದ್ದು, ಶುಭಕೋರಿದ ನಿಮಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಸಹೋದರಿ ಪ್ರಿಯಾಂಕ ಗಾಂಧಿ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇರವಾಗಿ ಭೇಟಿಯಾಗಿ ರಾಹುಲ್ ಗಾಂಧಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಾಹುಲ್ ಗಾಂಧಿ ಹುಟ್ಟುಹಬ್ಬದ ನಿಮಿತ್ತ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬಳಿಕ ನಗರದ ಕೆ.ಸಿ.ಜನರಲ್ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಾಗೂ ತಿನಿಸು ವಿತರಿಸಿದ್ದಾರೆ.

ಟ್ವೀಟ್ ಮೂಲಕ ಶುಭಾಶಯ ತಿಳಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ರಾಹುಲ್ ಗಾಂಧಿ ಅವರ ಜವಾಬ್ದಾರಿಗಳ ಬದ್ಧತೆ ಹಾಗೂ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಯಾವಾಗಲೂ ಪಕ್ಷಕ್ಕೆ ಬೆಂಬಲವಾಗಿರುತ್ತದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *