ಯುದ್ಧದ ಬದಲು ಬುದ್ಧನನ್ನು ವಿಶ್ವಕ್ಕೆ ನೀಡಿದ್ದೇವೆ: ಮೋದಿ

– ವಿಶ್ವಸಂಸ್ಥೆಯಲ್ಲೂ ಸಬ್ ಕಾ ಸಾಥ್, ಸಬ್ ಕಾ ವಿಕಾಶ್, ಸಬ್ ಕಾ ವಿಶ್ವಾಸ್ ಮಂತ್ರ

ನ್ಯೂಯಾರ್ಕ್: ಭಾರತವು ವಿಶ್ವಕ್ಕೆ ಯುದ್ಧದ ಬದಲು ಬುದ್ಧನನ್ನು ಕೊಡುಗೆ ನೀಡಿ, ಜಗತ್ತಿಗೆ ಶಾಂತಿಯ ಸಂದೇಶವನ್ನು ಸಾರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 130 ಕೋಟಿ ಭಾರತೀಯರ ಪ್ರತಿನಿಧಿಯಾಗಿ ಮಾತನಾಡುತ್ತಿರುವೆ. ಭಾರತವು ಅತ್ಯಂತ ಪುರಾತನ ಶ್ರೀಮಂತಿಕೆಯ ನೆಲವಾಗಿದೆ. ನಾವು ಸದಾ ಶಾಂತಿ-ಸೌಹಾರ್ದತೆಗೆ ಒತ್ತು ಕೊಡುತ್ತೇವೆ. ಜಾಗತಿಕ ರಾಷ್ಟ್ರಗಳ ಜೊತೆ ಸೌಹಾರ್ದ ಸಂಬಂಧ ಬಯಸುತ್ತಿದ್ದೇವೆ. ನಾವು ಬುದ್ಧರನ್ನು ಪ್ರತಿಪಾದಿಸುತ್ತೇವೆಯೇ ಹೊರತು ಯುದ್ಧವನ್ನಲ್ಲ ಎಂದು ಹೇಳಿದರು.

ಭಯೋತ್ಪಾದನೆ ಮಟ್ಟ ಹಾಕಲು ಪ್ರತಿಯೊಂದು ದೇಶವೂ ಕೈ ಜೋಡಿಸಬೇಕು. ಸದಾ ಶಾಂತಿಮಂತ್ರವನ್ನೇ ಜಪಿಸುವ ಭಾರತವು ಈಗಲೂ ಅದನ್ನೇ ಮುಂದುವರಿಸಿದೆ. ಆದರೆ ಭಯೋತ್ಪಾದನೆ ಹುಟ್ಟಡಗಿಸಲು ಮುಂದಾಗಿದೆ. ಇದು ಕೇವಲ ಒಂದು ರಾಷ್ಟ್ರಕ್ಕೆ ಸೀಮಿತವಾಗಿಲ್ಲ. ಅದು ಮನುಕುಲಕ್ಕೆ ಸವಾಲಾಗಿದೆ. ಆದ್ದರಿಂದ ಮಾನವೀಯ ಕಾರಣಗಳಿಗಾದರೂ ಭಯೋತ್ಪಾದನೆ ಮಟ್ಟಹಾಕಲು ವಿಶ್ವವೇ ಒಗ್ಗಟ್ಟಾಗಬೇಕು ಎಂದರು.

ಮಹಾತ್ಮ ಗಾಂಧೀಜಿ ಅವರ ಅಹಿಂಸಾ ವಾದ, ಸತ್ಯ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿದೆ. ದೇಶ ಅಭಿವೃದ್ಧಿ ಹಾಗೂ ಪ್ರಗತಿಗೆ ಶಾಂತಿಯು ಪೂರಕವಾಗಿದೆ. ಭಾರತವು ಶರವೇಗದಲ್ಲಿ ಅಭಿವೃದ್ಧಿ ಪತದಲ್ಲಿ ಸಾಗುತ್ತಿದೆ. ಇಡೀ ವಿಶ್ವವೇ ಭಾರತದ ಸಾಧನೆಯನ್ನು ನೋಡುತ್ತಿದೆ. ಇಡೀ ಜಾಗತಿಕ ಸಮುದಾಯವನ್ನು ಉತ್ತೇಜಿಸುವುದಕ್ಕೆ ಭಾರತ ಮಹತ್ವಾಕಾಂಕ್ಷಿ ಯೋಜನೆಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮೋದಿ ಹೇಳಿದರು.

ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಂತ್ರದ ಮೂಲಕ ಭಾರತವು ಅಭಿವೃದ್ಧಿ ಹೊಂದುವುದು ಸಾಧ್ಯವಾಗಿದೆ. ಕಳೆದ ಐದು ವರ್ಷದಲ್ಲಿ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇದು ಪರಿಸರ ಸಂರಕ್ಷಣೆಗೆ ಭಾರತ ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಜನಭಾಗಿಧಾರಿಯೊಂದಿಗೆ ಜನಕಲ್ಯಾಣ ನಮ್ಮ ಧೋರಣೆ, ಸಿದ್ಧಾಂತ ಎಂದು ಮೋದಿ ತಿಳಿಸಿದರು.

Comments

Leave a Reply

Your email address will not be published. Required fields are marked *