ಮೊದಲ ದಿನವೇ ಮೂವರು ಸಚಿವರಿಗೆ ಮೋದಿ ಕ್ಲಾಸ್!

ನವದೆಹಲಿ: ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಮೂವರು ಮಂತ್ರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಹೌದು. ಸಚಿವರಾದ ಡಿವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿಗೆ ಮೋದಿ ಛಾಟಿ ಬೀಸಿದ್ದಾರೆ. ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಎಚ್ಚರಿಕೆ ಕೊಟ್ಟಿದ್ದರು. ಆದರೆ ಮೋದಿಯವರ ಎಚ್ಚರಿಕೆಯನ್ನು ಮುರಿದ ಹಿನ್ನೆಲೆಯಲ್ಲಿ ಈ ಮೂವರು ಸಚಿವರ ವಿರುದ್ಧ ಗರಂ ಆಗಿದ್ದಾರೆ.

ಮೂವರು ಏನ್ ಹೇಳಿದ್ದರು?
ಪ್ರಮಾಣವಚನಕ್ಕೂ ಮೊದಲೇ ಈ ಮೂವರು `ನಮಗೆ ಸಚಿವ ಸ್ಥಾನ ಕೊಡ್ತಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಈ ವಿಚಾರ ಮೋದಿಯವರ ಗಮನಕ್ಕೆ ಬಂದಿದ್ದು, ಪ್ರಮಾಣ ವಚನದಂದೇ ನಡೆದ ಸಭೆಯಲ್ಲಿ ಮೂವರಿಗೆ ಪಾಠ ಮಾಡಿದ್ದಾರೆ.

ಮೋದಿ ಕ್ಲಾಸ್?
ನನ್ನ ಸಲಹೆಯನ್ನು ಯಾಕೆ ಪಾಲಿಸಿಲ್ಲ ಎಂದು ಮೂವರನ್ನೂ ಮೋದಿ ಪ್ರಶ್ನಿಸಿದ್ದಾರೆ. ಅಲ್ಲದೆ, ಕೆಲವು ಸಚಿವರಿಗೆ ದಿನಾ ಬೆಳಗ್ಗೆದ್ದು ದೇಶವನ್ನುದ್ದೇಶಿಸಿ ಮಾತಾಡುವ ಖಯಾಲಿ ಇದೆ. ಮೊದಲು ಅಧಿಕಾರ ಸ್ವೀಕರಿಸಿ, ನಿಮ್ಮ ಸಚಿವಾಲಯದ ಬಗ್ಗೆ ತಿಳಿದುಕೊಳ್ಳಿ. ಆಮೇಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಿ ಎಂದು ಪ್ರಮಾಣವಚನಕ್ಕೂ ಮೊದಲು ಸಂಜೆ 5 ಗಂಟೆಗೆ ನಡೆದಿದ್ದ ಹೊಸ ಸಚಿವರ ಸಭೆಯಲ್ಲಿ ಮೋದಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *