ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಸೆಗೆ ಪ್ರಧಾನಿ ನರೇಂದ್ರ ಮೋದಿ ತಣ್ಣೀರು ಹಾಕಿದ್ದಾರೆ. ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ (ASEAN) ಶೃಂಗಸಭೆಯಲ್ಲಿ ನಾನು ವರ್ಚುಯಲ್ ಆಗಿ ಭಾಗವಹಿಸುತ್ತೇನೆ ಎಂದು ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಇದೇ ಅ.26 ರಿಂದ 28 ರವರೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ ಆಸಿಯಾನ್ ಶೃಂಗಸಭೆ ಆಯೋಜನೆಗೊಂಡಿದೆ. ಈ ಶೃಂಗಸಭೆಯಲ್ಲಿ ಮೋದಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು. ಆದರೆ ನರೇಂದ್ರ ಮೋದಿ ಅವರೇ ಈಗ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ನಾನು ವರ್ಚುಯಲ್ ಆಗಿ ಈ ಸಭೆಯಲ್ಲಿ ಭಾಗಿಯಾಗಲಿದ್ದೇನೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಕಳೆದ ತಿಂಗಳು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್ ಮೀಡಿಯಾದಲ್ಲಿ, ಮುಂಬರುವ ವಾರಗಳಲ್ಲಿ ಮೋದಿ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು. ಈ ಪೋಸ್ಟ್‌ನಿಂದ ಆಸಿಯಾನ್ ಶೃಂಗಸಭೆಯಲ್ಲಿ ಇಬ್ಬರು ನಾಯಕರು ಭೇಟಿಯಾಗಬಹುದು ಎಂಬ ಊಹಾಪೋಹಕ್ಕೆ ಕಾರಣವಾಗಿತ್ತು.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.
Had a warm conversation with my dear friend, Prime Minister Anwar Ibrahim of Malaysia. Congratulated him on Malaysia’s ASEAN Chairmanship and conveyed best wishes for the success of upcoming Summits. Look forward to joining the ASEAN-India Summit virtually, and to further…
— Narendra Modi (@narendramodi) October 23, 2025
ಪ್ರಧಾನಿ ಮೋದಿ ವಾರ್ಷಿಕ ಆಸಿಯಾನ್ ಶೃಂಗಸಭೆಯಲ್ಲಿ ನಿಯಮಿತವಾಗಿ ಭಾಗವಹಿಸುತ್ತಿದ್ದಾರೆ. 2014 ರಿಂದ 2019 ರವರೆಗೆ ಪ್ರತಿ ವರ್ಷವೂ ಖುದ್ದಾಗಿ ಭಾಗವಹಿಸುತ್ತಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕದಿಂದಾಗಿ 2020 ಮತ್ತು 2021 ರ ಸಭೆಯಲ್ಲಿ ವರ್ಚುಯಲ್ ಆಗಿ ಭಾಗವಹಿಸಿದ್ದರು. 2022 ರಲ್ಲಿ ನಡೆದ ಶೃಂಗಸಭೆಯಲ್ಲಿ ಮಾತ್ರ ಮೋದಿ ಭಾಗಿಯಾಗಿರಲಿಲ್ಲ.
ಆಸಿಯಾನ್ ರಾಷ್ಟ್ರಗಳ ಜೊತೆ ಮೋದಿ ಅವರಿಗೆ ಉತ್ತಮ ಸಂಬಂಧವಿದೆ. ಹೀಗಿದ್ದರೂ ಮೋದಿ ಈ ಬಾರಿ ಶೃಂಗದಲ್ಲಿ ಭಾಗವಹಿಸದೇ ಇರಲು ನಿಖರ ಕಾರಣ ತಿಳಿದು ಬಂದಿಲ್ಲ. ಆಪರೇಷನ್ ಸಿಂಧೂರದ ಬಳಿಕ ಮೋದಿ ಮತ್ತು ಟ್ರಂಪ್ ಜೊತೆಗಿನ ಸಂಬಂಧ ಉತ್ತಮವಾಗಿಲ್ಲ ಮತ್ತು ಇಲ್ಲಿಯವರೆಗೆ ಇಬ್ಬರು ನಾಯಕರು ಪರಸ್ಪರ ಭೇಟಿಯಾಗಿಲ್ಲ.
ಈ ಹಿಂದೆ ಮೋದಿ ಜಿ7 ರಾಷ್ಟ್ರಗಳ ಶೃಂಗಸಭೆಗೆ ಕೆನಡಾಗೆ ತೆರಳಿದ್ದರು. ಈ ಸಂದರ್ಭದಲ್ಲಿ ಟ್ರಂಪ್ ಮೋದಿ ಅವರನ್ನು ಅಮೆರಿಕಕ್ಕೆ ಬರುವಂತೆ ಆಹ್ವಾನ ನೀಡಿದ್ದರು. ಆದರೆ ಮೋದಿ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವ ಕಾರಣ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಟ್ರಂಪ್ ಆಹ್ವಾನ ನೀಡುವಾಗ ಪಾಕ್ ಸೇನಾ ಮುಖ್ಯಸ್ಥ ಆಸೀಫ್ ಮುನೀರ್ ಸಹ ಅಮೆರಿಕದಲ್ಲೇ ಇದ್ದರು. ಟ್ರಂಪ್ ಮೋದಿ ಮತ್ತು ಮುನೀರ್ ಜೊತೆ ನಿಂತು ಯುದ್ಧ ನಿಲ್ಲಿಸಿದ್ದು ನಾನು ಎಂದು ಪೋಸ್ ಕೊಡಲು ಮುಂದಾಗಿದ್ದರು. ಆದರೆ ಮೋದಿ ನಯವಾಗಿ ಮನವಿಯನ್ನು ತಿರಸ್ಕರಿಸಿದ್ದರು.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ ಮೋದಿ ಭಾಗವಹಿಸಲು ಅಮೆರಿಕ್ಕೆ ತೆರಳಬೇಕಿತ್ತು. ಆದರೆ ಮೋದಿ ಬೇರೆ ಕಾರಣಗಳಿಂದಾಗಿ ಅಮೆರಿಕಕ್ಕೆ ತೆರಳಿರಲಿಲ್ಲ.
ಅಮೆರಿಕ ಭಾರತದ ಮೇಲೆ 25% ಸುಂಕ ವಿಧಿಸಿದ ಜೊತೆ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ಹೇರಿದೆ. ಇನ್ನು ಮುಂದೆಯೂ ರಷ್ಯಾದಿಂದ ಕಚ್ಚಾ ತೈಲ ಆಮದು ಮುಂದುವರಿಸಿದರೆ ಮತ್ತಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಈಗಾಗಲೇ ಭಾರತಕ್ಕೆ ಬೆದರಿಕೆ ಹಾಕಿದ್ದಾರೆ.
ಈಗಾಗಲೇ ಸಾಕಷ್ಟು ಬಾರಿ ಭಾರತ ಮತ್ತು ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಟ್ರಂಪ್ ಆಗಾಗ ಬಡಾಯಿ ಬಿಡುತ್ತಿದ್ದಾರೆ. ಭಾರತ ಟ್ರಂಪ್ ಹೇಳಿಕೆಯನ್ನು ತಿರಸ್ಕರಿಸಿದ್ದರೂ ಟ್ರಂಪ್ ಈ ಹೇಳಿಕೆಯನ್ನು ನೀಡುತ್ತಲೇ ಇದ್ದಾರೆ. ಆಸಿಯಾನ್ ಶೃಂಗಸಭೆಯ ಸಂದರ್ಭದಲ್ಲೂ ಟ್ರಂಪ್ ಮತ್ತೆ ಈ ಮಾತನ್ನು ಹೇಳುವ ಸಾಧ್ಯತೆಯಿದೆ. ಈ ಮುಜುಗರದಿಂದ ಪಾರಾಗಲು ಮೋದಿ ಈ ಶೃಂಗಸಭೆಗೆ ನೇರವಾಗಿ ಭಾಗಿಯಾಗುತ್ತಿಲ್ಲ ಎಂಬ ವಿಶ್ಲೇಷಣೆ ಕೇಳಿಬಂದಿದೆ.
