ದಾರಿಯುದ್ದಕ್ಕೂ ನಿಂತು ಮೋದಿಯನ್ನು ಸ್ವಾಗತಿಸಿದ ಭೂತಾನ್ ಜನತೆ

ಥಿಂಪು: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಯ ಹಿನ್ನೆಲೆಯಲ್ಲಿ ಇಂದು ನೆರೆಯ ಭೂತಾನ್ ದೇಶವನ್ನು ತಲುಪಿದ್ದಾರೆ. ಅಲ್ಲಿನ ಜನತೆ ಮೋದಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಥಿಂಪುವಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಾನ್ ಪ್ರಧಾನಿ ಡಾ.ಲೋಟೈ ತ್ಸೆರಿಂಗ್ ಅದ್ಧೂರಿಯಾಗಿ ಸ್ವಾಗತಿಸಿದರು. ಈ ವೇಳೆ ಪುಟ್ಟ ಬಾಲಕಿಯೊಬ್ಬರು ಮೋದಿ ಅವರಿಗೆ ಪುಷ್ಪಗುಚ್ಚ ನೀಡಿ, ವಿಶೇಷ ಗೌರವ ಸಲ್ಲಿಸಿದಳು.

ಥಿಂಪು ವಿಮಾನ ನಿಲ್ದಾಣದಲ್ಲಿ ಅನೇಕರು ಭಾರತ ತ್ರಿವರ್ಣ ಧ್ವಜ ಹಿಡಿದು ಮೋದಿ ಅವರನ್ನು ಸ್ವಾಗತಿಸಿ, ಮೋದಿ ಪರ ಘೋಷಣೆ ಕೂಗಿದರು. ವಿಮಾನ ನಿಲ್ದಾಣದಿಂದ ವಾಹನದಲ್ಲಿ ಪ್ರಯಾಣ ಬೆಳೆಸಿದ ಮೋದಿ ಅವರಿಗೆ ದಾರಿಯುದ್ದಕ್ಕೂ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರು ಕೈಬಿಸಿ ಆತ್ಮೀಯತೆ ಮೆರೆದರು.

ಭೂತಾನ್‍ಗೆ ತಲುಪಿದ ಬಳಿಕ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ಅವರು, ಭೂತಾನ್ ಪ್ರಧಾನಿಯ ಆತ್ಮೀಯ ಸ್ವಾಗತ ನಿಜಕ್ಕೂ ತುಂಬಾ ಖುಷಿಕೊಟ್ಟಿದೆ. ಅಲ್ಲದೇ ತ್ಸೆರಿಂಗ್ ಆತಿಥ್ಯ ಹೃತ್ಪೂರ್ವಕವಾಗಿತ್ತು ಎಂದು ಹೇಳಿದ್ದಾರೆ.

ಭೂತಾನ್ ಪ್ರಧಾನಿ ಲೋಟೈ ತ್ಸೆರಿಂಗ್ ಅವರು ಟ್ವೀಟ್ ಮಾಡಿ, ದಾರಿಯುದ್ದಕ್ಕೂ ನಿಂತು ಸ್ವಾಗತಕೋರಿದ ಮಹಿಳೆಯರು, ವಿದ್ಯಾರ್ಥಿಗಳು, ಶಿಕ್ಷಕರು, ಜನಸಾಮಾನ್ಯರಿಗೆ ಪ್ರಧಾನಿ ಕೈಬಿಸಿ ಪ್ರತಿಕ್ರಿಯೆ ನೀಡಿದರು. ಇದು ಅವರ ಆತ್ಮೀಯತೆಯನ್ನು ತೋರಿಸುತ್ತದೆ ಹಾಗೂ ಮಕ್ಕಳ ಮೇಲಿನ ವಾತ್ಸಲ್ಯವನ್ನು ಸ್ಪಷ್ಟಪಡಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ವಿದೇಶಿ ಪ್ರವಾಸ ಕೈಗೊಂಡಿದ್ದು ನೆರೆಯ ಭೂತಾನ್ ದೇಶಕ್ಕೆ. ಹೀಗಾಗಿ ಭೂತಾನ್ ಹಾಗೂ ಭಾರತದ ಸಂಬಂಧ ಮತ್ತಷ್ಟು ಉತ್ತಮಗೊಂಡಿತು.

Comments

Leave a Reply

Your email address will not be published. Required fields are marked *