ರಾಹುಲ್ ಭಾಷಣದ ವೇಳೆ ಮೋದಿ ನಕ್ಕಿದ್ದೇಕೆ?

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧದ ಅವಿಶ್ವಾಸಗೊತ್ತುವಳಿ ನಿರ್ಣಯ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಲ್ಲರ ಗಮನ ಸೆಳೆದರು. ಆದರೆ ಈ ವೇಳೆ ಬಹುಕಾಲ ಸಮ್ಮನೆ ಕುಳಿತ್ತಿದ್ದ ಪ್ರಧಾನಿ ಮೋದಿ ಒಮ್ಮೆಲೆ ರಾಹುಲ್ ಮಾತು ಕೇಳಿ ನಗು ಬೀರಿದ್ದರು.

ಭಾಷಣದ ಆರಂಭದಿಂದಲೂ ಗಂಭೀರ ಆರೋಪಗಳನ್ನು ಮಾಡಿದ ರಾಹುಲ್ ಗಾಂಧಿ, ಮೋದಿ ಹಲವು ವಿಷಯಗಳಲ್ಲಿ ಮೌನವಹಿಸಿದ್ದಾರೆ. ಆದರೆ ಅವರು ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡುವ ಶಕ್ತಿ ಹೊಂದಿಲ್ಲ. ನನ್ನ ಕಣ್ಣಿನಿಂದ ಮೋದಿ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ರಾಹುಲ್ ಭಾಷಣದ ವೇಳೆ ಬಿಜೆಪಿ ಸಂಸದರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಮೂಡಿಸಿದ್ದರೂ ಸಹ ಮೋದಿ ಗಂಭೀರವಾಗಿ ರಾಹುಲ್ ಭಾಷಣವನ್ನು ಆಲಿಸುತ್ತಿದ್ದರು. ಆದರೆ ಪ್ರಧಾನಿಗಳು ತಮ್ಮ ಕಣ್ಣಿನಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ ಎಂದಾಕ್ಷಣ ಮೋದಿ ನಕ್ಕು ಸುಮ್ಮನಾದರು.

ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳ ಸುರಿಮಳೆಗೈದ ರಾಹುಲ್, ಹಿಂದೂಸ್ತಾನ ಮಹಿಳೆಯರಿಗೆ ರಕ್ಷಣೆ ನೀಡುವ ವಿಚಾರದಲ್ಲಿ ಎಡವಿದೆ. ಇತ್ತೀಚಿನ ಕೆಲವು ದಿನಗಳಲ್ಲಿ ಮಹಿಳೆಯರ ದೌರ್ಜನ್ಯ, ಗ್ಯಾಂಗ್ ರೇಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಮೊದಲು ಈ ರೀತಿಯ ಪ್ರಕರಣಗಳು ದೇಶದಲ್ಲಿ ನಡೆದಿರಲಿಲ್ಲ. ಮಹಿಳೆಯರ ರಕ್ಷಣಾ ವಿಚಾರದಲ್ಲಿ ಪ್ರಧಾನಿ ಮೋದಿ ಎಡವಿದ್ದಾರೆ. ದಲಿತ ಮತ್ತು ಆದಿವಾಸಿ, ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ಸತತವಾಗಿ ನಡೆಯುತ್ತಿವೆ. ಬಿಜೆಪಿ ಮಂತ್ರಿಗಳ ಹೆಸರುಗಳು ಅತ್ಯಾಚಾರದಂತಹ ಪ್ರಕರಣದಲ್ಲಿ ಕೇಳಿ ಬರುತ್ತಿವೆ. ಎಲ್ಲದರ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ವಿಚಾರದಲ್ಲಿ ಮಾತ್ರ ಮೌನವಾಗಿದ್ದಾರೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು ಭಾರತೀಯರು ಅಲ್ಲವೇ ಎಂದು ಪ್ರಶ್ನಿಸಿದರು. ಈ ರೀತಿಯ ಪ್ರಕರಣಗಳು ದೇಶಕ್ಕೆ ಶೋಭೆ ತರುವುದಿಲ್ಲ. ಕೊಲೆಗಡುಕರಿಗೆ ಸಚಿವರೇ ಹಾರ ಹಾಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

Comments

Leave a Reply

Your email address will not be published. Required fields are marked *