ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ

– ಒಟ್ಟು 6 ವಂದೇ ಭಾರತ್‌ ಎಕ್ಸ್‌ಪ್ರೆಸ್‌, 2 ಅಮೃತ್‌ ಭಾರತ್‌ ರೈಲುಗಳಿಗೆ ಚಾಲನೆ
– ಕರ್ನಾಟಕಕ್ಕೆ 2 ವಂದೇ ಭಾರತ್‌, 1 ಅಮೃತ್‌ ಭಾರತ್‌ ರೈಲು ಭಾಗ್ಯ

ಅಯೋಧ್ಯೆ: ಕರ್ನಾಟಕಕ್ಕೆ‌ ಸಂಪರ್ಕ ಕಲ್ಪಿಸಲಿರುವ 2 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಹೊಸ ಮಾದರಿಯ ಒಂದು ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸೇರಿದಂತೆ ದೇಶದ ವಿವಿಧ ನಗರಳಿಗೆ ಸಂಪರ್ಕಿಸುವ ಒಟ್ಟು 8 ರೈಲುಗಳ ಸಂಚಾರ ಸೇವೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಯೋಧ್ಯೆಯಲ್ಲಿ ವರ್ಚುವಲ್‌ ಆಗಿ ಚಾಲನೆ ನೀಡಿದ್ದಾರೆ.

ಹೊಸದಾಗಿ ಚಾಲನೆಗೊಂಡ ವಂದೇ ಭಾರತ್‌ ರೈಲುಗಳು ಮಂಗಳೂರು-ಮುಂಡ್ಗಾವ್‌ (ಗೋವಾ) ಮತ್ತು ಬೆಂಗಳೂರು-ಕೊಯಮತ್ತೂರು ನಡುವೆ ಸಂಚರಿಸಿದರೆ, ಅಮೃತ್‌ ಭಾರತ್‌ ರೈಲು (Amrit Bharat Trains) ಪಶ್ಚಿಮ ಬಂಗಾಳದ ಮಾಲ್ಡಾ-ಬೆಂಗಳೂರು ನಡುವೆ ಸಂಚರಿಸಲಿದೆ. ಈಗಾಗಲೇ ರಾಜ್ಯದಲ್ಲಿ ಬೆಂಗಳೂರು-ಬೆಳಗಾವಿ, ಬೆಂಗಳೂರು-ಹೈದರಾಬಾದ್‌, ಮೈಸೂರು-ಚೆನ್ನೈ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು (Vande Bharat Trains) ಸಂಚರಿಸುತ್ತಿವೆ, ಇದೀಗ ಮಂಗಳೂರು-ಮುಂಡ್ಗಾವ್‌ ಹಾಗೂ ಬೆಂಗಳೂರು-ಕೊಯಮತ್ತೂರು ನಡುವೆಯೂ ಸಂಚಾರ ಆರಂಭಗೊಂಡಿದೆ.

ಅತ್ಯಾಧುನಿಕ ತಂತ್ರಜ್ಞಾನ ಆಧರಿತವಾಗಿರುವ ಅಮೃತ್‌ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತದೆ. 22 ಕೋಚ್‌ಗಳನ್ನ ಒಳಗೊಂಡಿದ್ದು, 1,800 ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸಬಹುದಾಗಿದೆ. ಅನೇಕ ಐಷಾರಾಮಿ ಸೌಲಭ್ಯಗಳನ್ನೂ ಈ ರೈಲು ಒಳಗೊಂಡಿದೆ. ಇದನ್ನೂ ಓದಿ: ಅತ್ಯಾಧುನಿಕ ಅಯೋಧ್ಯೆ ರೈಲು ನಿಲ್ದಾಣಕ್ಕೆ ನಮೋ ಚಾಲನೆ – ಏನಿದರ ವಿಶೇಷತೆ?

ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ:
2 ಅಮೃತ್‌ ಭಾರತ್‌ ರೈಲುಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಸಂವಾದ ನಡೆಸಿದರು.

ಅಯೋಧ್ಯಧಾಮ ಜಂಕ್ಷನ್‌ಗೆ ನಮೋ ಚಾಲನೆ:
ಒಟ್ಟು 8 ವಿಶೇಷ ರೈಲುಗಳಿಗೆ ಹಸಿರು ನಿಶಾನೆ ತೋರುವುದಕ್ಕೂ ಮುನ್ನವೇ ಮೋದಿ ಅವರು ಅಭಿವೃದ್ಧಿಪಡಿಸಲಾದ ಅಯೋಧ್ಯಧಾಮ ಜಂಕ್ಷನ್ ರೈಲು ನಿಲ್ದಾಣದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಎಂ ಯೋಗಿ ಆದಿತ್ಯನಾಥ್‌, ಸಚಿವ ಅಶ್ವಿನಿ ವೈಷ್ಣವ್‌ ಸೇರಿದಂತೆ ಪ್ರಮುಖ ಗಣ್ಯರು ಜೊತೆಯಲ್ಲಿದ್ದರು.

ಏನಿದರ ವಿಶೇಷತೆ?
ಏರ್‌ಪೋರ್ಟ್ ವ್ಯವಸ್ಥೆಯ ರೈಲ್ವೇ ನಿಲ್ದಾಣದಂತಿರುವ ಅಯೋಧ್ಯಧಾಮ ಜಂಕ್ಷನ್ (Ayodhya Dham Junction) ಸಂಪೂರ್ಣ ಪರಿಸರ ಸ್ನೇಹಿಯಾಗಿ ನಿರ್ಮಿಸಲಾಗಿದೆ. ರಾಮ ಮಂದಿರದಿಂದ 2.1 ಕಿ.ಮೀ. ದೂರದಲ್ಲಿ ನಿರ್ಮಾಣಗೊಂಡಿದ್ದು, ಮೊದಲ ಹಂತದಲ್ಲಿ 250 ಕೋಟಿ ರೂ. ವೆಚ್ಚದಲ್ಲಿ ಕೆಲಸ ಕಾರ್ಯ ನಡೆದಿದೆ. 10,000 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ರೈಲು ನಿಲ್ದಾಣ ಅಭಿವೃದ್ಧಿಗೆ 3 ಪ್ಲಾಟ್‌ ಫಾರಂಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗಿದೆ. 3 ಅಂತಸ್ತಿನ ಕಟ್ಟಡ, ಲಿಫ್ಟ್, ಎಸ್ಕಲೇಟರ್, ಮಕ್ಕಳ ಆರೈಕೆ ಕೊಠಡಿ, ಫುಡ್ ಪ್ಲಾಜಾ, ಪೂಜಾ ಪರಿಕರ ಅಂಗಡಿಗಳಿವೆ. 2ನೇ ಹಂತದಲ್ಲಿ 480 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಯಲಿದೆ.