ಅಡ್ವಾಣಿ ಎದುರಿಗೆ ಬಂದ್ರೂ ನಮಸ್ಕರಿಸಲ್ಲ, ಮೋದಿಗೆ ಯಾರ ಬಗ್ಗೆ ಗೌರವವಿದೆ: ಖರ್ಗೆ ಕಿಡಿ

ಕಲಬುರಗಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ದೇಶಕ್ಕೆ ಆಘಾತವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್‍ಕೆ ಅಡ್ವಾಣಿ ಅವರು ಎದುರಿಗೆ ಬಂದರು ನಮಸ್ಕಾರ ಮಾಡಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆರ್‍ಎಸ್‍ಎಸ್, ಸಂಘ ಪರಿವಾರ ಜೊತೆ ಒಡನಾಟವಿದ್ದರು ಸಹ ಸಹಿಷ್ಣುತೆಯಿಂದ ಬದುಕಿದ್ದಾರೆ. ಅವರ ನಿಧನದಿಂದ ದೇಶಕ್ಕೆ ಆಘಾತವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ಅಟಲ್ ಬದುಕಿದ್ದಾಗ ಪ್ರಧಾನಿ ಮೋದಿ ಎಷ್ಟು ಸಲ ಭೇಟಿಯಾಗಿದ್ದಾರೆ? ಬಿಜೆಪಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿ ಎದುರಿಗೆ ಬಂದರು ಸಹ ಪ್ರಧಾನಿ ಮೋದಿ ನಮಸ್ಕರಿಸಲ್ಲ. ಮೋದಿ ಅವರನ್ನು ಉಳಿಸಿ ಬೆಳೆಸಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ ಮೋದಿಗೆ ಯಾರ ಬಗ್ಗೆ ಗೌರವವಿದೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.

ಇದೇ ವೇಳೆ ಯುಎಇ ಯಿಂದ ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ನಾವು ಸಹ ಬೇಡ ಎಂದು ತಿರಸ್ಕಾರ ಮಾಡಿದ್ದೇವೆ. ಅದು ಅಂದಿನ ಸರ್ಕಾರದ ನಿಲುವಾಗಿತ್ತು. ಆದರೆ ಈಗಾಗಾಗಲೇ ನಿಧಿಯನ್ನು ಪರಿಹಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ಕೇರಳ ಸಿಎಂ ಹೇಳಿದ್ದಾರೆ. ಅಲ್ಲದೇ ಕೇರಳ ಸಿಎಂ ಕೇಂದ್ರ ಸರ್ಕಾರಕ್ಕೆ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅನುದಾನಕ್ಕೆ ಮನವಿ ಮಾಡಿದ್ದಾರೆ. ಇಷ್ಟು ಹಣ ಕೇಂದ್ರವೇ ನೀಡಿದರೆ, ಬೇರೆ ಕಡೆಯಿಂದ ಪಡೆಯುವ ಪ್ರಶ್ನೆ ಬರಲ್ಲ. ಕೇರಳದ ಹಾಗೇ ಕೊಡಗಿಗೆ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ವಿಮಾನ ಹಾರಾಟ: ಆಗಸ್ಟ್ 26 ರಂದು ಕಲಬುರಗಿ ವಿಮಾನನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಮಾಡಲಾಗುವುದು ಎಂದು ತಿಳಿಸಿದ ಅವರು, ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿಯಿರುವ ವಿಮಾನ ನಿಲ್ದಾಣದ ಪ್ರಯೋಗಿಕ ಸಂಚಾರಕ್ಕಾಗಿ ಎಲ್ಲಾ ಹಂತದ ಸಿದ್ಧತೆಗಳು ಮುಗಿದಿದೆ. ಪ್ರಯೋಗಿಕ ಸಂಚಾರ ಮಾಡಲು ಭಾರತದ ವಿಮಾನ ಪ್ರಾಧಿಕಾರ ಅನುಮತಿ ನೀಡಬೇಕು ಎಂದು ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *