ಅಂಡರ್ 19 ವಿಶ್ವಕಪ್ ಗೆದ್ದು ಬೀಗಿದ ಭಾರತ- ಯುವಪಡೆಗೆ ಮೋದಿ ಅಭಿನಂದನೆ

ನವದೆಹಲಿ: 2022ರ ಅಂಡರ್-19 ವಿಶ್ವಕಪ್ ಫೈನಲ್‍ನಲ್ಲಿ ಟೀಂ ಇಂಡಿಯಾ, ಇಂಗ್ಲೆಂಡ್ ತಂಡವನ್ನು 4 ವಿಕೆಟ್‍ಗಳಿಂದ ಬಗ್ಗು ಬಡಿದು ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಯುವಪಡೆಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ನಮ್ಮ ಯುವ ಕ್ರಿಕೆಟಿಗರ ಬಗ್ಗೆ ಅತ್ಯಂತ ಹೆಮ್ಮೆಯಿದೆ. ಐಸಿಸಿ ಅಂಡರ್- 19 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ಅವರು ಈ ಪಂದ್ಯಾವಳಿಯಲ್ಲಿ ಉತ್ತಮ ಸ್ಥೈರ್ಯವನ್ನು ತೋರಿಸಿದ್ದಾರೆ. ಭಾರತದ ಕ್ರಿಕೆಟ್ ಭವಿಷ್ಯವು ಸುರಕ್ಷಿತವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭಾರತದ ಕಿರಿಯರ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಅಂಡರ್ 19 ವಿಶ್ವಕಪ್ ಗೆದ್ದು ಬೀಗಿದೆ. ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಅಂಡರ್-19 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡ ಬ್ಯಾಟ್ಸ್‍ಮನ್‍ಗಳಿಗೆ ಭಾರತೀಯ ಬೌಲರ್‍ಗಳು ಸವಾಲಾಗಿ ಪರಿಣಮಿಸಿದ್ರು. ಆಂಗ್ಲರು 44.5 ಓವರ್‍ಗಳಿಗೆ 189 ರನ್ ಗಳಿಸಲಷ್ಟೇ ಶಕ್ತವಾಯ್ತು. ಭಾರತದ ಪರ ಬೌಲಿಂಗ್ ವಿಭಾಗದಲ್ಲಿ ರವಿ ಕುಮಾರ್ 34 ರನ್‍ಗಳನ್ನು ನೀಡಿ 4 ವಿಕೆಟ್ ಹಾಗೂ ರಾಜ್ ಬಾವ 31 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು, ಇಬ್ಬರೂ ಬೌಲರ್ ಗಳು ತಲಾ 1 ಮೇಡಿನ್ ಓವರ್ ಮಾಡಿದರು.  ಇದನ್ನೂ ಓದಿ: 5ನೇ ಬಾರಿ ಅಂಡರ್-19 ವಿಶ್ವಕಪ್ ಮುಡಿಗೇರಿಸಿಕೊಂಡ ಭಾರತ

ಇಂಗ್ಲೆಂಡ್‍ನ ಸಾಧಾರಣ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಆಂಗ್ಕ್ರಿಶ್ ರಘುವಂಶಿ ಎರಡು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸದೇ ವಿಕೆಟ್ ನೀಡಿದ್ದು ಆರಂಭಿಕ ಆಘಾತವಾಯಿತು. ಮತ್ತೋರ್ವ ಆರಂಭಿಕ ಆಟಗಾರ ಹರ್ನೂರ್ ಸಿಂಗ್ ಸಹ 46 ಎಸೆತಗಳನ್ನು ಎದುರಿಸಿ 21 ರನ್ ಗಳ ಸಾಧಾರಣ ಮೊತ್ತವನ್ನು ಕಲೆಹಾಕಿದ್ದು, 2 ನೇ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಿಸಿತ್ತು. ನಂತರ 84 ಎಸೆತಗಳನ್ನು ಎದುರಿಸಿ 50 ರನ್ ಗಳಿಸುವ ಮೂಲಕ ಶೇಖ್ ರಶೀದ್ ತಂಡಕ್ಕೆ ಚೇತರಿಕೆ ನೀಡಿದರಾದರೂ ಯಶ್ ಧುಲ್ ಉತ್ತಮ ಜೊತೆಯಾಟ ನೀಡಲು ಸಾಧ್ಯವಾಗಲಿಲ್ಲ.

ನಿಶಾಂತ್ ಸಿಂಧು 54 ಎಸೆತಗಳಲ್ಲಿ 50 ರನ್ ಗಳಿಸಿ ತಂಡದ ಗೆಲುವಿನ ಕನಸನ್ನು ಜೀವಂತವಾಗಿರಿಸಿದರು. ರಾಜ್ ಬಾವ 54 ಎಸೆತಗಳಲ್ಲಿ 34 ರನ್ ಗಳಿಸಿದರೆ, ನಿಶಾಂತ್ ಸಿಂಧು ಹಾಗೂ ದಿನೇಶ್ ಬನಾ ಭಾರತ ತಂಡವನ್ನು ಗೆಲುವಿನ ದಡ ಸೇರಿಸಿದರು. ಭಾರತ ಇಂಗ್ಲೆಂಡ್ ತಂಡದ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್ ನ್ನು ಮುಡಿಗೇರಿಸಿಕೊಂಡಿತು.

Comments

Leave a Reply

Your email address will not be published. Required fields are marked *